ಬಳ್ಳಾರಿ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಭೂಒಡೆತನ ಯೋಜನೆಯಡಿ ಜಮೀನಿನ ಸೌಲಭ್ಯಕ್ಕಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಭೂ ರಹಿತ ಕೃಷಿ ಕಾರ್ಮಿಕ ಮಹಿಳಾ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಏ.20 ಕೊನೆಯ ದಿನಾಂಕವಾಗಿರುತ್ತದೆ.
ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು ಮತ್ತು ಷರತ್ತುಗಳ ವಿವರ:
ಅರ್ಜಿದಾರರು ಪರಿಶಿಷ್ಟ ಪಂಗಡದ ಜನಾಂಗಕ್ಕೆ ಸೇರಿದ ಮಹಿಳೆಯರಾಗಿರಬೇಕು, ಅರ್ಜಿದಾರರು ಸುಮಾರು 15 ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅರ್ಜಿದಾರರು 18 ವರ್ಷದಿಂದ 50 ವರ್ಷದೊಳಗಿನ ವಯೋಮಾನದವರಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ರೂ.1,50 ಲಕ್ಷ ಮಿತಿಯೊಳಗಿರಬೇಕು. ಅರ್ಜಿದಾರರು ಭೂರಹಿತ ಕೃಷಿ ಕಾರ್ಮಿಕ ಕುಟುಂಬದ ಮಹಿಳೆಯಾಗಿರತಕ್ಕದ್ದು ಹಾಗೂ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸೌಲಭ್ಯ ಕಲ್ಪಿಸಲಾಗುವುದು(ತನ್ನ ಹೆಸರಿನಲ್ಲಾಗಲಿ ಅಥವಾ ಗಂಡ/ಅತ್ತೆ/ಮಾವ/ಮಕ್ಕಳ ಹೆಸರಿನಲ್ಲಾಗಲಿ ಜಮೀನು ಹೊಂದಿರಬಾರದು),
ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು. ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು. ಅರ್ಜಿದಾರರು ವಾಸಿಸುವ ಸ್ಥಳ ಜಮೀನಿಗೆ 10 ಕಿಲೋಮೀಟರ್ ವ್ಯಾಪ್ತಿಯಲ್ಲಿರಬೇಕು.
ಅರ್ಜಿ ಸಲ್ಲಿಸುವವರು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳ ವಿವರ:
ಪಾಸ್‍ಪೋರ್ಟ್ ಅಳತೆಯ ಭಾವಚಿತ್ರದ ಅರ್ಜಿ, ತಹಶೀಲ್ದಾರ್ ಅವರು ನೀಡಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ (ಆರ್.ಡಿ.ಸಂಖ್ಯೆಯೊಂದಿಗೆ), ಕುಟುಂಬದ ಪಡಿತರ ಚೀಟಿ (ರೇಷನ್ ಕಾರ್ಡ್), ಆಧಾರ್ ಕಾರ್ಡ್ ಪ್ರತಿ/ಮತದಾರರ ಗುರುತಿನ ಚೀಟಿ, ಭೂ ರಹಿತ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತಿಲಕನಗರದ ಕಂಟೋನ್ಮೆಂಟ್ ಬಳಿ ಇರುವ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ದೂ: 08392-245551 ಗೆ ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.