
ಶಿವಮೊಗ್ಗ: ಜಮೀನು ಪೋಡಿಗೆ ಲಂಚ ಸ್ವೀಕರಿಸಿದ್ದ ಭದ್ರಾವತಿ ಭೂಮಾಪನಾ ಪರಿವೀಕ್ಷಕ ಟಿ.ಮಲ್ಲಿಕಾರ್ಜುನಯ್ಯಗೆ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಲಾಗಿದೆ.
ಬಸವರಾಜಪ್ಪ ಎಂ.ಹೆಚ್. ಮತ್ತಿಘಟ್ಟ ಗ್ರಾಮ. ಭದ್ರಾವತಿ ತಾಲ್ಲೂಕು ರವರ ಹೆಸರಿನಲ್ಲಿದ್ದ ಸ.ನಂ.56/10 ರಲ್ಲಿನ 1 ಎಕರೆ 20 ಗುಂಟೆ ಜಮೀನಿನ ಪಕ್ಕ ಪೋಡಿ ದುರಸ್ಥಿ ಮಾಡಿಕೊಡುವ ಬಗ್ಗೆ ಭದ್ರಾವತಿ ತಾಲ್ಲೂಕು ಎ.ಡಿ.ಎಲ್.ಆರ್ ಕಚೇರಿಯ ಭೂಮಾಪನಾ ಪರಿವೀಕ್ಷಕ ಟಿ.ಮಲ್ಲಿಕಾರ್ಜುನಯ್ಯ ಎಂಬುವವರು ಲಂಚದ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಶಿವಮೊಗ್ಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದಿನಾಂಕ:23/07/2013 ರಂದು ಸದರಿ ಅಪಾದಿತ ಅಧಿಕಾರಿ ಪಿರ್ಯಾದುದಾರರಿಂದ 15,000 ರೂ. ಲಂಚದ ಹಣವನ್ನು ಶಿವಮೊಗ್ಗ ನಗರ ವಿನೋಬನಗರ ಬಡಾವಣೆಯ ಕೆಂಚಪ್ಪ ಲೇಔಟ್ ನ ಆಪಾದಿತರ ವಾಸದ ಮನೆಯಲ್ಲಿ ಕೇಳಿ ಪಡೆದುಕೊಳ್ಳುವಾಗ ಟ್ರ‍್ಯಾಪ್ ಮಾಡಲಾಗಿರುತ್ತದೆ. ಕೆ.ಸಿ.ಪುರುಷೋತ್ತಮ, ಪೊಲೀಸ್ ಇನ್ಸ್ಪೆಕ್ಟರ್, ಕ.ಲೋ.ಶಿವಮೊಗ್ಗ ಅವರು ಪ್ರಕರಣವನ್ನು ತನಿಖೆ ಕೈಗೊಂಡು ಆಪಾದಿತರ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇಂದು ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮರುಳಸಿದ್ದಾರಾದ್ಯ ಹೆಚ್.ಜೆ. ಅವರು ಆರೋಪಿ ಟಿ.ಮಲ್ಲಿಕಾರ್ಜುನಯ್ಯ ಇವರಿಗೆ ಒಂದು ವರ್ಷ ಆರು ತಿಂಗಳು ಕಾರಾಗೃಹ ಶಿಕ್ಷೆ ಮತ್ತು 30,000ರೂ ದಂಡ ವಿಧಿಸಿ ಆದೇಶಿಸಿರುತ್ತಾರೆ.
ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಎಂ.ಡಿ.ಸುಂದರ್ ರಾಜ್ ವಾದ ಮಂಡಿಸಿದ್ದರು.