ರಾಂಚಿ: ಭೂ ಹಗರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಶೀಘ್ರದಲ್ಲೇ ಬಂಧಿಸುವ ಸಾಧ್ಯತೆ ಇದೆ. ಸೋರೆನ್ ಅವರ ರಾಂಚಿ ನಿವಾಸದಲ್ಲಿ ಕೇಂದ್ರೀಯ ಸಂಸ್ಥೆಯಿಂದ ಗಂಟೆಗಳ ವಿಚಾರಣೆಯ ನಂತರ ಅವರನ್ನು ಬಂಧಿಸಬಹುದು ಎನ್ನಲಾಗಿದೆ.
ಸಿಎಂ ನಿವಾಸ ಮತ್ತು ರಾಜಭವನದ ಹೊರಗೆ ಸೆಕ್ಷನ್ 144 ಹೇರಲಾಗಿದೆ. ಸದ್ಯ ಸಿಎಂ ಮನೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಬೀಡುಬಿಟ್ಟಿದ್ದು, ಸೊರೇನ್ ಬಂಧನದ ಸಾಧ್ಯತೆ ಹೆಚ್ಚಿದೆ.
ಈ ಪ್ರಕರಣದಲ್ಲಿ ಇಡಿ ಇದುವರೆಗೆ 14 ಮಂದಿಯನ್ನು ಬಂಧಿಸಿದೆ. ರಕ್ಷಣಾ ಪಡೆಗಳಿಗೆ ಸೇರಿದ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಆದಾಯದ ಮೂಲಕ ರಾಂಚಿ ಬಳಿಯ 7.16 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬ ಆರೋಪದ ಬಗ್ಗೆ ಸಂಸ್ಥೆ ತನಿಖೆ ನಡೆಸುತ್ತಿದೆ. ಸೋರೆನ್ ಅವರು ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದ್ದಾರೆ.