ಚಿಕ್ಕಮಗಳೂರು: ಒತ್ತುವರಿದಾರರಿಗೇ ಕಂದಾಯ ಭೂಮಿ ಗುತ್ತಿಗೆ ನೀಡಲು ಕ್ರಮಕೈಗೊಳ್ಳಲಾಗುವುದು. ಇದಕ್ಕಾಗಿ ಭೂಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕಂದಾಯ ಸಚಿವ ಅರ್. ಅಶೋಕ್ ಹೇಳಿದ್ದಾರೆ.
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಕಾಫಿ ಬೆಳೆಗಾರರ ಸಂಘಟನೆಗಳಿಂದ ಏರ್ಪಡಿಸಿದ್ದ ಕಾಫಿ ಬೆಳೆಗಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆಗಾರರು ಒತ್ತುವರಿ ಮಾಡಿಕೊಂಡಿರುವ ಕಂದಾಯ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗುವುದು. 5 ಎಕರೆ, 10 ಎಕರೆ, 15 ಎಕರೆ, 25 ಎಕರೆ ಒತ್ತುವರಿ ಮಾಡಿದವರಿಗೆ ಪ್ರತ್ಯೇಕ ದರ ನಿಗದಿ ಪಡಿಸಲಾಗುವುದು. ಯಾವ ರೀತಿ ಅನುಕೂಲ ಮಾಡಬಹುದೆನ್ನುವುದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಕಾನೂನು ಪ್ರಕಾರವೇ ಒತ್ತುವರಿದಾರರಿಗೆ ಕಂದಾಯ ಭೂಮಿ ಗುತ್ತಿಗೆ ನೀಡಲು ಕ್ರಮಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಕಾಯ್ದೆ ಜಾರಿಯಾದರೆ ಒತ್ತುವರಿದಾರರ ಮೇಲೆ ಕೇಸು ದಾಖಲಿಸಲು ಬರುವುದಿಲ್ಲ. ಅಲ್ಲದೆ, ವ್ಯವಸಾಯ ಮಾಡುವ ಜಮೀನಿನ ಮೇಲೆ ಸಾಲ ಪಡೆಯಲು ಅವಕಾಶ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.