ಬೆಂಗಳೂರು: ಭೂ ಪರಿವರ್ತನೆ ಕುರಿತಾದ ಹಿಂದಿನ ಆದೇಶ ಹಿಂಪಡೆದು ಭೂ ಪರಿವರ್ತನೆ ಪ್ರಕ್ರಿಯೆ ಸರಳೀಕರಣ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಭೂ ಪರಿವರ್ತನೆಯಾದ ಜಮೀನಿನ ಉದ್ದೇಶ ಬದಲಾವಣೆ ಮಾಡಲು ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಆಯುಕ್ತರು 2022 ರ ಮಾರ್ಚ್ 7ರಂದು ಹೊರಡಿಸಿದ್ದ ಆದೇಶವನ್ನು 2023ರ ಜನವರಿ 30ರಂದು ಹಿಂಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಸದಸ್ಯ ಸಿ.ಎನ್. ಮಂಜೇಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಭೂ ಪರಿವರ್ತನೆಯಾಗಿರುವ ಜಮೀನಿನ ಉದ್ದೇಶ ಬದಲಾವಣೆಗೆ ಸಂಬಂಧಿಸಿದಂತೆ ಸ್ವೀಕೃತವಾದ ಅರ್ಜಿಗಳನ್ನು ಉಪ ವಿಭಾಗಾಧಿಕಾರಿಗಳು ವಿಚಾರಣೆ ನಡೆಸಿ, ಆ ಜಮೀನಿನ ಆರ್.ಟಿ.ಸಿ.ಯಲ್ಲಿ ನಮೂದಾಗಿರುವ ಭೂ ಪರಿವರ್ತನೆ ತೆಗೆದು ಹಾಕಲು ಆದೇಶ ಹೊರಡಿಸಬೇಕು. ಬಳಿಕ ಜಿಲ್ಲಾಧಿಕಾರಿಗಳು ಈಗಾಗಲೇ ಪರಿವರ್ತಿಸಲಾದ ಜಮೀನನ್ನು ಬೇರೆ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಬೇಕೆಂದು ಆಯುಕ್ತರು ಆದೇಶಿಸಿದ್ದು, ಇದರಿಂದ ಭೂ ಪರಿವರ್ತನೆ ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಆಯುಕ್ತರು 2022ರ ಮಾರ್ಚ್ 7ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆದುಕೊಳ್ಳಲಾಗಿದ್ದು, ಭೂ ಪರಿವರ್ತನೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.