ವಿಶ್ವ ವಿಖ್ಯಾತ ತಾಜ್ ಮಹಲ್ ನಿರ್ಮಾಣವಾಗಿರುವ ಜಾಗ ಜೈಪುರದ ದೊರೆ ಜೈಸಿಂಗ್ ಅವರಿಗೆ ಸೇರಿದೆ ಎಂದು ಬಿಜೆಪಿ ಸಂಸದೆ ದಿಯಾ ಕುಮಾರಿ ತಿಳಿಸಿದ್ದಾರೆ.
ಈ ಜಾಗ ಜೈಪುರ ದೊರೆಯದ್ದಾಗಿದ್ದು, ಇದನ್ನುಮೊಘಲ್ ಚಕ್ರವರ್ತಿ ಶಾಜಹಾನ್ ವಶಪಡಿಸಿಕೊಂಡಿದ್ದ. ಈ ಜಾಗಕ್ಕೆ ಸಂಬಂಧಿಸಿದ ದಾಖಲೆಗಳು ಜೈಪುರ ರಾಜ ಮನೆತನದಲ್ಲಿವೆ ಎಂದು ಅವರು ಹೇಳಿದ್ದಾರೆ.
ತಾಜ್ ಮಹಲ್ ನ ಇತಿಹಾಸದ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯಲು ತನಿಖೆ ನಡೆಸುವಂತೆ ಮತ್ತು ಮುಚ್ಚಿರುವ 22 ಕೊಠಡಿಗಳನ್ನು ತೆರೆಯುವಂತೆ ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವುದನ್ನು ಬೆಂಬಲಿಸಿರುವ ದಿಯಾ ಕುಮಾರಿ, ಈ ತನಿಖೆ ನಡೆದರೆ ಸತ್ಯಾಸತ್ಯತೆ ಹೊರಬರಲಿದೆ ಎಂದಿದ್ದಾರೆ.
ಗಂಡನಿಂದ ದೂರವಾದ ಮಹಿಳೆ ಮದುವೆಯಾಗಲು ಪೀಡಿಸಿದ ಸಂಬಂಧಿಯಿಂದಲೇ ಘೋರ ಕೃತ್ಯ
ಈ ಜಾಗದಲ್ಲಿ ಸ್ಮಾರಕ ನಿರ್ಮಾಣಕ್ಕೂ ಮುನ್ನ ಏನಿತ್ತು ಎನ್ನುವುದನ್ನು ತನಿಖೆ ಮಾಡಬೇಕಾದ ಅಗತ್ಯವಿದೆ ಮತ್ತು ಈ ಬಗ್ಗೆ ತಿಳಿದುಕೊಳ್ಳುವ ಹಕ್ಕು ಜನರಿಗಿದೆ. ಈ ಜಾಗಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳು ಜೈಪುರ ರಾಜಮನೆತನದ ಕುಟುಂಬಗಳಲ್ಲಿ ಲಭ್ಯವಿವೆ ಮತ್ತು ಅಗತ್ಯ ಬಿದ್ದರೆ ಅವುಗಳನ್ನು ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಭೂಮಿಗೆ ಬದಲಾಗಿ ಪರಿಹಾರವನ್ನು ನೀಡಲಾಗಿದೆ. ಆದರೆ, ಎಷ್ಟು ನೀಡಲಾಗಿದೆ ಎಂಬುದರ ಬಗ್ಗೆ ಹೇಳಲು ಸಾಧ್ಯವಿಲ್ಲ. ಏಕೆಂದರೆ, ನಮ್ಮ ಪೋತಿಖಾನದಲ್ಲಿರುವ ದಾಖಲೆಗಳನ್ನು ನಾನು ಅಧ್ಯಯನ ಮಾಡಿಲ್ಲ. ಆದರೆ, ತಾಜ್ ಮಹಲ್ ನಿರ್ಮಾಣವಾಗಿರುವ ಜಾಗ ನಮ್ಮ ಕುಟುಂಬಕ್ಕೆ ಸೇರಿದ್ದು, ಅದನ್ನು ಶಹಜಹಾನ್ ವಶಪಡಿಸಿಕೊಂಡಿರುವುದಂತೂ ನಿಜ ಎಂದು ಅವರು ಪ್ರತಿಪಾದಿಸಿದ್ದಾರೆ.
ತಾಜ್ ಮಹಲ್ ನಲ್ಲಿ 22 ಕೊಠಡಿಗಳಿಗೆ ಏಕೆ ಬೀಗ ಹಾಕಲಾಗಿದೆ ಎಂಬುದು ಜನರಿಗೆ ತಿಳಿಯಬೇಕಿದೆ. ಈ ಜಾಗದಲ್ಲಿ ತಾಜ್ ಮಹಲ್ ಗಿಂತ ಮೊದಲು ಏನಾದರೂ ಇದ್ದಿರಬಹುದು. ಅದು ದೇವಸ್ಥಾನವೂ ಆಗಿರಬಹುದು. ಈ ಎಲ್ಲಾ ಅಂಶಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕು ಇದೆ ಎಂದು ಅವರು ಹೇಳಿದ್ದಾರೆ.