ಮುಕೇಶ್ ಅಂಬಾನಿಯವರ ಅದ್ದೂರಿ ಮಹಲು ಆಂಟಿಲಿಯಾ ನಿರ್ಮಾಣವಾದ ಜಾಗದಲ್ಲಿ ಮೊದಲು ಏನಿತ್ತು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಅಂಬಾನಿ ಮನೆ ಜಾಗದಲ್ಲಿ ಅನಾಥಾಶ್ರಮವಿತ್ತು. ವಕ್ಫ್ ಬೋರ್ಡ್ ಅಡಿಯಲ್ಲಿ ನಡೆಸಲ್ಪಡುವ ಕರಿಂಬೋಯ್ ಇಬ್ರಾಹಿಂ ಖೋಜಾ ಯತಿಮ್ಖಾನಾ ಎಂಬ ಅನಾಥಾಶ್ರಮವಿತ್ತು ಎಂದು ವರದಿ ಮಾಡಲಾಗಿದೆ.
1895 ರಲ್ಲಿ ಶ್ರೀಮಂತ ಹಡಗು ಮಾಲೀಕರಾದ ಕುರಿಂಬೋಯ್ ಇಬ್ರಾಹಿಂ ಇದನ್ನು ಶುರು ಮಾಡಿದ್ದರು. ಇದು ಒಂದು ಶತಮಾನಕ್ಕೂ ಹೆಚ್ಚು ಕಾಲ ಹಿಂದುಳಿದ ಖೋಜಾ ಮಕ್ಕಳಿಗಾಗಿ ಸೇವೆ ಸಲ್ಲಿಸಿತು. 2002 ರಲ್ಲಿ ಅನಾಥಾಶ್ರಮವನ್ನು ನಿರ್ವಹಿಸುವ ಟ್ರಸ್ಟ್, ಭೂಮಿಯನ್ನು ಮಾರಾಟ ಮಾಡಲು ಅನುಮತಿ ಕೇಳಿತು. ಮೂರು ತಿಂಗಳ ನಂತರ, ಚಾರಿಟಿ ಕಮಿಷನರ್ ಮಾರಾಟವನ್ನು ಅನುಮೋದಿಸಿದರು.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಆಗ ಸುಮಾರು 30 ಮಿಲಿಯನ್ ಡಾಲರ್ ಮೌಲ್ಯದ ಭೂಮಿಯನ್ನು ಮುಕೇಶ್ ಅಂಬಾನಿಯ ಆಂಟಿಲಿಯಾ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್‌ಗೆ ಆಗ ಕೇವಲ 2.5 ಮಿಲಿಯನ್ ಡಾಲರ್ ಗೆ ಮಾರಾಟ ಮಾಡಲಾಗಿತ್ತು. ಆದ್ರೆ ಈ ಬೆಲೆ ವಿವಾದಕ್ಕೆ ಕಾರಣವಾಗಿತ್ತು.
ಈಗ ಅನಾಥಾಶ್ರಮವಿದ್ದ ಜಾಗದಲ್ಲಿ ಆಂಟಿಲಿಯಾ ತಲೆ ಎತ್ತಿದೆ. ಅಮೇರಿಕನ್ ಆರ್ಕಿಟೆಕ್ಚರಲ್ ಸಂಸ್ಥೆ ಪರ್ಕಿನ್ಸ್ ಮತ್ತು ವಿಲ್ ವಿನ್ಯಾಸಗೊಳಿಸಿದ ಆಂಟಿಲಿಯಾ 27 ಮಹಡಿಗಳನ್ನು ಹೊಂದಿದೆ. ಜಿಮ್, ಸ್ಪಾ, ಥಿಯೇಟರ್, ಟೆರೇಸ್ ಗಾರ್ಡನ್, ಈಜುಕೊಳ, ದೇವಸ್ಥಾನ, ಆರೋಗ್ಯ ಸೌಲಭ್ಯಗಳು ಮತ್ತು 168 ಕಾರುಗಳಿಗೆ ಪಾರ್ಕಿಂಗ್‌ನಂತಹ ಐಷಾರಾಮಿ ಸೌಕರ್ಯಗಳ ವ್ಯವಸ್ಥೆ ಇಲ್ಲಿದೆ. ಆಂಟಿಲಿಯಾ ರಿಕ್ಟರ್ ಮಾಪಕದಲ್ಲಿ 8 ರವರೆಗಿನ ಭೂಕಂಪವನ್ನು ತಡೆದುಕೊಳ್ಳಬಲ್ಲದು.
ಆಂಟಿಲಿಯಾ ನಿರ್ಮಾಣವು 2006 ರಲ್ಲಿ ಪ್ರಾರಂಭವಾಯಿತು. 2003 ರಲ್ಲಿ ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಶನ್ ನಿಂದ ಅನುಮೋದನೆ ಪಡೆದ ನಂತರ 2010 ರಲ್ಲಿ ಕೆಲಸ ಪೂರ್ಣಗೊಂಡಿತ್ತು. ನವೆಂಬರ್ 2010 ರಲ್ಲಿ ಅಂಬಾನಿ ಕುಟುಂಬ ಆಂಟಿಲಿಯಾದಲ್ಲಿ ಗೃಹ ಪ್ರವೇಶ ಸಮಾರಂಭವನ್ನು ಆಯೋಜಿಸಿತ್ತು. ಆದ್ರೆ ವಾಸ್ತುದೋಷ ಸಮಸ್ಯೆಯಿಂದ ಜೂನ್ 2011 ರಲ್ಲಿ, ಸುಮಾರು 50 ಪುರೋಹಿತರು ವಾಸ್ತು ದೋಷವನ್ನು ನಿವಾರಿಸಲು ಪೂಜೆ ಮಾಡಿದ್ದರು. ಅಂತಿಮವಾಗಿ ಸೆಪ್ಟೆಂಬರ್ 2011 ರಿಂದ ಅಂಬಾನಿ ಕುಟುಂಬ ಇಲ್ಲಿ ನೆಲೆಸಿದೆ.
ಕುರಿಂಬೋಯ್ ಇಬ್ರಾಹಿಂ ಖೋಜಾ ಯತೀಮ್ಖಾನಾದಿಂದ ಆಂಟಿಲಿಯಾಗೆ ಪರಿವರ್ತನೆಯು ಅದರ ಪರಂಪರೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಒಂದು ಕಾಲದಲ್ಲಿ ದತ್ತಿ ತಾಣವಾಗಿದ್ದ ಇದು ಇಂದು ಅಪಾರ ಸಂಪತ್ತು ಮತ್ತು ವಾಸ್ತುಶಿಲ್ಪದ ಪರಾಕ್ರಮದ ಸಂಕೇತವಾಗಿದೆ. 2014 ರಲ್ಲಿ ವಿಶ್ವದ ಅತ್ಯಂತ ದುಬಾರಿ ಮನೆ ಎಂದು ಇದನ್ನು ಘೋಷಿಸಲಾಗಿತ್ತು.