ಬೆಂಗಳೂರು: ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ದೇವರಾಜ ಅರಸು ಜನ್ಮ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವರಾಜ ಅರಸು ಅವರು ಕೃಷಿಕರು ಮಾತ್ರ ಕೃಷಿ ಭೂಮಿ ಖರೀದಿಸಬೇಕು ಎಂದು ತಂದಿದ್ದ ಕಾಯ್ದೆಗೆ ಬಿಜೆಪಿಯವರು ತಿದ್ದುಪಡಿ ತಂದು ನೇಗಿಲು ಹಿಡಿಯಲು ಬಾರದವರಿಗೂ ಕೃಷಿ ಭೂಮಿ ಖರೀದಿಗೆ ಅವಕಾಶ ಕಲ್ಪಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಗೆ ಬಹುಮತ ಬಂದ ಕೂಡಲೇ ಈ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಿ ಹಿಂದಿನಂತೆ ಕೃಷಿಕರಷ್ಟೇ ಕೃಷಿ ಭೂಮಿ ಕರಿರಿಸುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅರಸು ಅವರು ಉಳುವವನೇ ಭೂಮಿಯೊಡೆಯ ಎಂದು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿ ಅಸಂಖ್ಯಾತ ಜನರಿಗೆ ಭೂಮಿಯ ಮಾಲೀಕತ್ವ ನೀಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಭೂಮಿಯ ಹಕ್ಕನ್ನು ಖಾತ್ರಿಪಡಿಸಲು 79 ಎ ಮತ್ತು ಬಿ ಗೆ ಮಾಡಿರುವ ತಿದ್ದುಪಡಿಯನ್ನು ಮತ್ತೆ ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ.