ದಾವಣಗೆರೆ: ಸರ್ಕಾರಿ ಆಸ್ತಿಗಳೆಂದರೆ ಯಾರು ಬೇಕಾದರೂ ಒತ್ತುವರಿ ಮಾಡಬಹುದು ಮತ್ತು ಯಾರು ಕೇಳುವವರಿಲ್ಲ ಎಂಬ ಭಾವನೆ ಇತ್ತು. ಆದರೆ ಸರ್ಕಾರಿ ಆಸ್ತಿಗಳ ಕಾವಲಿಗೆ ಲ್ಯಾಂಡ್ ಬೀಟ್ ವ್ಯವಸ್ಥೆ ಜಾರಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ತಿಗಳ ಒತ್ತುವರಿಗೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಅವರು ಬುಧವಾರ ದಾವಣಗೆರೆ ಕಸಬಾ ಹೋಬಳಿಯ ದೊಡ್ಡಬಾತಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸರ್ವೆ ನಂಬರ್ 34 ರಲ್ಲಿನ ಸರ್ಕಾರಿ ಸ್ಮಶಾನದ ಜಮೀನನ್ನು ಸ್ವತಃ ಆಪ್ ಮೂಲಕ ಸರ್ವೆ ಮಾಡಿ ಒತ್ತುವರಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಜಿಯೋ ಫೆನ್ಸಿಂಗ್ ಮಾಡಿರುತ್ತಾರೆ.
ಸರ್ಕಾರಿ ಆಸ್ತಿಗಳ ಸಂರಕ್ಷಣೆ ಮಾಡಲು ಸರ್ಕಾರ ಹೊಸ ತಂತ್ರಾಂಶವನ್ನು ಅಭಿವೃದ್ದಿಪಡಿಸಿದೆ. ಈ ತಂತ್ರಾಂಶದ ಮೂಲಕ ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಎಲ್ಲಾ ಜಮೀನುಗಳಿಗೆ ಜಿಯೋಫೆನ್ಸಿಂಗ್ ಮಾಡುತ್ತಾರೆ. ಈ ಆಪ್ ಮೂಲಕ ಜಿಯೋ ಫೆನ್ಸಿಂಗ್ ಮಾಡಿ, ಒತ್ತುವರಿ ಮಾಡಿದ್ದಲ್ಲಿ ಅಂತಹ ಆಸ್ತಿಗಳ ವಿವರ ಲಬ್ಯವಾಗುತ್ತದೆ. ಈ ಸ್ಥಳಗಳಿಗೆ ನಿಗದಿತ ಅವಧಿಯಲ್ಲಿ ಭೇಟಿ ನೀಡಲು ಯಾವ ರೀತಿ ಪೊಲೀಸ್ ಬೀಟಿಂಗ್ ವ್ಯವಸ್ಥೆ ಇರುತ್ತದೆ, ಅದೇ ರೀತಿ ಸರ್ಕಾರಿ ಆಸ್ತಿಗಳ ಸಂರಕ್ಷಣೆ ಮಾಡಲು ಬೀಟಿಂಗ್ ವ್ಯವಸ್ಥೆಯನ್ನು ಆಪ್‍ನಲ್ಲಿ ಕಲ್ಪಿಸಲಾಗಿದೆ.
ಈ ಆಪ್ ಮೂಲಕ ಪ್ರಾಯೋಗಿಕ ಸರ್ವೆಯನ್ನು ದೊದ್ದಬಾತಿಯಲ್ಲಿ ಜಿಲ್ಲಾಧಿಕಾರಿಯವರು ಖುದ್ದು ಕೈಗೊಂಡು ಸರ್ವೆ ನಂಬರ್ 34 ರಲ್ಲಿ ಸರ್ಕಾರಿ ಸ್ಮಶಾನ ಭೂಮಿ ಒತ್ತುವರಿಯಾಗಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ಖಚಿತಪಡಿಸಿಕೊಂಡರು. ಈ ಭೂಮಿಯು ಒತ್ತುವರಿಯಾಗಿರುವುದಿಲ್ಲ ಎಂಬುದು ಇದರಿಂದ ಮಾಹಿತಿ ಲಭ್ಯವಾಯಿತು. ಆಪ್ ಮೂಲಕ ಎಲ್ಲಾ ಸರ್ಕಾರಿ ಜಮೀನು, ಜಾಗಗಳನ್ನು ಸರ್ವೆ ಮಾಡಿ ಜಿಯೋ ಫೆನ್ಸಿಂಗ್ ಮಾಡುವ ಮೂಲಕ ದತ್ತಾಂಶ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳೊಂದಿಗೆ ತಹಶೀಲ್ದಾರ್ ಡಾ; ಅಶ್ವಥ್ ಹಾಗೂ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.