ತಮಿಳುನಾಡಿನ ಕುನೂರ್ ಬಳಿ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಉಂಟಾದ ದುರಂತ ಭಾರತೀಯರ ಪಾಲಿಗೆ ನುಂಗಲಾರದ ತುತ್ತಾಗಿದೆ. ಹುತಾತ್ಮರಾದ ಯೋಧರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟುವಂತಿದೆ.
ಇದೇ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ನಾಯಕ್ ಬಿ. ಸಾಯಿತೇಜ ಕುಟುಂಬ ಈ ಸುದ್ದಿಯನ್ನು ಸ್ವೀಕರಿಸಿದ ರೀತಿ ಕರಳು ಹಿಂಡುವಂತಿದೆ.
ದುರಂತ ನಡೆದ ದಿನ ಬೆಳಗ್ಗೆ 8 ಗಂಟೆ ಸುಮಾರಿಗೆ ಬಿ. ಸಾಯಿತೇಜ ತಮ್ಮ ಪತ್ನಿ ಶ್ಯಾಮಲಾಗೆ ಕರೆ ಮಾಡಿದ್ದರು. ಪತಿಯೊಂದಿಗೆ ಆರಾಮಾಗಿ ಮಾತನಾಡಿದ್ದ ಶ್ಯಾಮಲಾ ಇದೇ ತನ್ನ ಪತಿಯ ಕೊನೆ ಕರೆಯಾಗಿರಬಹುದು ಎಂಬ ಚಿಕ್ಕ ಊಹೆಯಲ್ಲಿಯೂ ಇರಲಿಲ್ಲ.
ಪತ್ನಿಯೊಂದಿಗೆ ಮಾತನಾಡುವ ವೇಳೆ ಬಿ. ಸಾಯಿತೇಜ ತಾನು ಸಿಡಿಎಸ್ ಜನರಲ್ ಬಿಪಿನ್ ರಾವತ್ರ ಭದ್ರತಾ ಸಿಬ್ಬಂದಿಯಾಗಿ ವೆಲ್ಲಿಂಗ್ಟನ್ಗೆ ತೆರಳುತ್ತಿರೋದಾಗಿ ಹೇಳಿದ್ದರು. ಈ ಕರೆ ಮಾಡಿದ ಕೇವಲ ನಾಲ್ಕು ಗಂಟೆಗಳ ಬಳಿಕ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಾಯಿತೇಜ ಕೂಡ ಹುತಾತ್ಮರಾಗಿದ್ದಾರೆ. ಹುತಾತ್ಮ ನಾಯಕ್ ಸಾಯಿತೇಜ ಪತ್ನಿ ಶ್ಯಾಮಲಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ 27 ವರ್ಷದ ಸಾಯಿತೇಜ 5 ವರ್ಷದ ಪುತ್ರಿ ಮೋಕ್ಷಜ್ಞ ಹಾಗೂ 3 ವರ್ಷದ ಪುತ್ರಿ ದರ್ಶಿನಿಯನ್ನು ಅಗಲಿದ್ದಾರೆ. ಈ ಮುಗ್ಧ ಮಕ್ಕಳು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದು ನಿಜಕ್ಕೂ ದುರಂತ.
ಗಣೇಶ ಚತುರ್ಥಿ ನಿಮಿತ್ತ ಮೂರು ತಿಂಗಳ ಹಿಂದೆಯಷ್ಟೇ ಸಾಯಿತೇಜ ಮನೆಗೆ ಭೇಟಿ ನೀಡಿದ್ದರು. ಸಾಯಿತೇಜ ತಾಯಿ ತನ್ನ ಇಬ್ಬರು ಮಕ್ಕಳನ್ನು ಭಾರತೀಯ ಸೇನೆ ಸೇರ್ಪಡೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹುತಾತ್ಮ ಯೋಧ ಸಾಯಿತೇಜ ಅವರ ತಮ್ಮ ಮಹೇಶ್ ಸಿಕ್ಕಿಂನಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಚಿತ್ತೂರಿನ ಕಂಟೆವರಿಪಲ್ಲಿಯಲ್ಲಿ ಜನಿಸಿದ ಸಾಯಿತೇಜ 2013ರಲ್ಲಿ ಬೆಂಗಳೂರು ರೆಜಿಮೆಂಟ್ನಲ್ಲಿ ಭಾರತೀಯ ಸೇನೆಗೆ ನೇಮಕಗೊಂಡಿದ್ದರು. 1 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಸಾಯಿತೇಜ ಮತ್ತೊಮ್ಮೆ ಇಲಾಖೆ ಪರೀಕ್ಷೆ ಬರೆದು ಬಳಿಕ 11 ಪ್ಯಾರಾ ಸ್ಟೇಷನ್ ಫೋರ್ಸ್ ನಾಯಕ್ ಆಗಿ ನೇಮಕಗೊಂಡಿದ್ದರು.
ಬೆಂಗಳೂರು ತರಬೇತಿ ಕ್ಯಾಂಪ್ನಲ್ಲಿ ಟ್ರೇನಿಂಗ್ ಪಡೆದಿದ್ದ ಸಾಯಿತೇಜ ಬಳಿಕ ಜನರಲ್ ಬಿಪಿನ್ ರಾವತ್ರ ವೈಯಕ್ತಿಕ ಭದ್ರತಾ ವಿಂಗ್ನ ಸಿಬ್ಬಂದಿಯಾಗಿ ನೇಮಕಗೊಂಡಿದ್ದರು. 2016ರಲ್ಲಿ ಸಾಯಿತೇಜ ಶ್ಯಾಮಲಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.