ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ನಾಳೆಯಿಂದ ಫ್ಲವರ್ ಶೋ ಆರಂಭವಾಗಲಿದ್ದು, ಆಗಸ್ಟ್ 15ರವರೆಗೆ ನಡೆಯಲಿದೆ. ಈ ಬಾರಿ ಫ್ಲವರ್ ಶೋನಲ್ಲಿರುವ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ.
ಆಗಸ್ಟ್ 4ರಿಂದ ಆರಂಭವಾಗಲಿರುವ ಫ್ಲವರ್ ಶೋ ಆಗಸ್ಟ್ 15ರವರೆಗೆ ಇರಲಿದ್ದು, 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತೋಟಗಾರಿಕಾ ಇಲಾಖೆಯಿಂದ 214ನೇ ಫ್ಲವರ್ ಶೋ ಆಯೋಜಿಸಲಾಗಿದೆ. ನಾಳೆ ಸಂಜೆ ಸಿಎಂ ಸಿದ್ದರಾಮಯ್ಯ ಫ್ಲವರ್ ಶೋ ಉದ್ಘಾಟನೆ ಮಾಡಲಿದ್ದಾರೆ.
ವಿಧಾನಸೌಧ ಹಾಗೂ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರ ಪರಿಕಲ್ಪನೆಯಲ್ಲಿ ಈ ವರ್ಷದ ಫ್ಲವರ್ ಶೋ ಮೂಡಿ ಬರುತ್ತಿದೆ. ಬರೋಬ್ಬರಿ 2 ಕೋಟಿ ವೆಚ್ಚದಲ್ಲಿ 69 ಬಗೆಯ ಹೂಗಳು ಈ ಬಾರಿಯ ಫ್ಲವರ್ ಶೋ ಚಂದವನ್ನು ಹೆಚ್ಚಿಸಲಿವೆ. 12 ಲಕ್ಷ ಜನರು ಬರುವ ನಿರೀಕ್ಷೆ ಇದೆ.
ಫ್ಲವರ್ ಶೋದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಇರಲಿದ್ದು, ಶಾಲಾ ಮಕ್ಕಳಿಗಾಗಿಯೇ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಲಾಲ್ ಬಾಗ್ ನ ನಾಲ್ಕು ಗೇಟ್ ಗಳ ಮೂಲಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಫ್ಲವರ್ ಶೋ ಪ್ರವೇಶಕ್ಕೆ ದೊಡ್ಡವರಿಗೆ 70 ರೂಪಾಯಿ ಹಾಗೂ ಮಕ್ಕಳಿಗೆ 30 ರೂಪಾಯಿ ನಿಗದಿ ಮಾಡಲಾಗಿದೆ. 200 ಸಿಸಿಟಿವಿ ಕಣ್ಗಾವಲು ಇಡಲಾಗಿದೆ.
ಜನರಿಗೆ ಆರೋಗ್ಯ ಸಮಸ್ಯೆಯಾಗದಂತೆ ಹೆಲ್ತ್ ಕೇರ್ ಸೆಂಟರ್, ಎರಡು ಆಂಬುಲೆನ್ಸ್, ಮಹಿಳೆಯರ ಶಿಬಿರ ವ್ಯವಸ್ಥೆ ಮಾಡಲಾಗಿದೆ. ಲಾಲ್ ಬಾಗ್ ನಲ್ಲಿರುವ ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಾಯಿಗಳಿಗೆ ವ್ಯಾಕ್ಸಿನ್ ಮಾಡಿಸಲಾಗಿದೆ.
ಫ್ಲವರ್ ಶೋನಲ್ಲಿ ಈ ಬಾರಿ ಪ್ರಮುಖವಾಗಿ ಸ್ವದೇಶಿ ಹೂಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 7 ಲಕ್ಷ ಹೂಗಳನ್ನು ಲಾಲ್ ಬಾಗ್ ನರ್ಸರಿಯಲ್ಲಿ ಬೆಳೆಸಲಾಗಿದೆ. ಇನ್ನು 8 ಲಕ್ಷದಷ್ಟು ಹೂಗಳನ್ನು ರಾಜ್ಯದ ವಿವಿಧ ಭಾಗಗಳಿಂದ ಹಾಗೂ ನಂದಿಗಿರಿಧಾಮ, ಕೆಮ್ಮಣ್ಣುಗುಂಡಿ ಗಿರಿಧಾಮ, ತಮಿಳುನಾಡು, ಆಂಧ್ರಪ್ರದೇಶ, ಊಟಿಯಿಂದ ತರಿಸಲಾಗುತ್ತಿದೆ.