ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಪಕ್ಷದ ಸದಸ್ಯತ್ವ ಅಭಿಯಾನದ ಭಾಗವಾಗಿ ಮಂಗಳವಾರ ಬಿಜೆಪಿಯ ಸಕ್ರಿಯ ಸದಸ್ಯತ್ವವನ್ನು ಪಡೆದರು.
ಅವರಿಗೆ ಪ್ರಮಾಣ ಪತ್ರ ನೀಡಿ ಪೇಟ ತೊಡಿಸಿ ಗೌರವಿಸಲಾಯಿತು. ಬಿಜೆಪಿಯ ಸದಸ್ಯತ್ವ ಅಭಿಯಾನದ ಅಂಗವಾಗಿ 10 ಕೋಟಿಗೂ ಹೆಚ್ಚು ಜನರು ಪಕ್ಷದ ಸದಸ್ಯರಾಗಿದ್ದಾರೆ ಎಂದು ಹೇಳಲಾಗಿದೆ.
ಪ್ರಸ್ತುತ 11 ಕೋಟಿ ಸದಸ್ಯರ ಹಿಂದಿನ ದಾಖಲೆಯನ್ನು ಮೀರಿಸುವುದು ಬಿಜೆಪಿಯ ಗುರಿಯಾಗಿದೆ. ಸದಸ್ಯತ್ವ ಅಭಿಯಾನವನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದೆ.
1942ರಲ್ಲಿ ಆರ್.ಎಸ್.ಎಸ್. ಸೇರಿದ್ದ ಎಲ್.ಕೆ. ಅಡ್ವಾಣಿ
ನವೆಂಬರ್ 8, 1927 ರಂದು ಜನಿಸಿದ ಎಲ್.ಕೆ.ಅಡ್ವಾಣಿ ಅವರು 1942 ರಲ್ಲಿ ಸ್ವಯಂಸೇವಕರಾಗಿ RSS ಗೆ ಸೇರ್ಪಡೆಗೊಂಡರು ಮತ್ತು 1986 ರಿಂದ 1990 ರವರೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು, ನಂತರ 1993 ರಿಂದ 1998 ರವರೆಗೆ ಮತ್ತು 2004 ರಿಂದ 2005 ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
1980 ರಲ್ಲಿ ದಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಎಲ್.ಕೆ. ಅಡ್ವಾಣಿ ಬಿಜೆಪಿಯನ್ನು ಸ್ಥಾಪಿಸಿದರು.
ಈ ವರ್ಷದ ಸೆಪ್ಟೆಂಬರ್ ನಲ್ಲಿ, ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ, ಪಕ್ಷದ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್ ಅವರೊಂದಿಗೆ ಪಕ್ಷದ ಸದಸ್ಯತ್ವ ಅಭಿಯಾನದ ಭಾಗವಾಗಿ ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ಬಿಜೆಪಿ ಸದಸ್ಯತ್ವ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.
ಇದಕ್ಕೂ ಮುನ್ನ ಸೆಪ್ಟೆಂಬರ್ 2 ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸದಸ್ಯತ್ವವನ್ನು ನವೀಕರಿಸುವ ಮೂಲಕ ಬಿಜೆಪಿಯ 2024 ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಿದರು.