ಬೆಂಗಳೂರು : ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ ಫ್ಲವರ್ ಶೋಗೆ ಜನಸಾಗರವೇ ಹರಿದು ಬಂದಿದ್ದು, ಮೊದಲ ದಿನವೇ 28 ಸಾವಿರ ಮಂದಿ ಭೇಟಿ ನೀಡಿದ್ದಾರೆ.
ವಿವಿಧ ರೀತಿಯ ಹೂವುಗಳನ್ನು ವೀಕ್ಷಣೆ ಮಾಡಿ ಸಾರ್ವಜನಿಕರು ಸಂತೋಷಪಟ್ಟರು. ಶಕ್ತಿ ಯೋಜನೆ ಹಿನ್ನೆಲೆ ಮಹಿಳೆಯರ ಸಂಖ್ಯೆಯೇ ಹೆಚ್ಚಿದ್ದು, ವಿವಿಧ ಊರುಗಳಿಂದ ಫ್ಲವರ್ ಶೋ ವೀಕ್ಷಿಸಲು ಮಹಿಳೆಯರು ತಂಡೋಪತಂಡವಾಗಿ ಆಗಮಿಸಿದರು.
ಶನಿವಾರ 28 ಸಾವಿರ ಜನ ಆಗಮಿಸಿದ್ದು, 18.50 ಲಕ್ಷ ರೂ. ಸಂಗ್ರಹವಾಗಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ.ಜಗದೀಶ್ ಮಾಹಿತಿ ನೀಡಿದ್ದಾರೆ.
76 ನೇ ಸ್ವತಂತ್ರ ಮಹೋತ್ಸವದ ಹಿನ್ನೆಲೆಯಲ್ಲಿ 214 ನೇ ಫ್ಲವರ್ ಶೋ ಆಯೋಜನೆ ಮಾಡಲಾಗಿದ್ದು, ವಿಧಾನಸೌಧ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪರಿಕಲ್ಪನೆಯಲ್ಲಿ ಈ ವರ್ಷದ ಫ್ಲವರ್ ಶೋ ಮೂಡಿ ಬಂದಿದೆ. ಇನ್ನು 8 ಲಕ್ಷದಷ್ಟು ಹೂಗಳನ್ನು ರಾಜ್ಯದ ವಿವಿಧ ಭಾಗಗಳಿಂದ ಹಾಗೂ ನಂದಿಗಿರಿಧಾಮ, ಕೆಮ್ಮಣ್ಣುಗುಂಡಿ ಗಿರಿಧಾಮ, ತಮಿಳುನಾಡು, ಆಂಧ್ರಪ್ರದೇಶ, ಊಟಿಯಿಂದ ತರಿಸಲಾಗಿದೆ.