ಬೆಂಗಳೂರು: ಬೆಳಗಾವಿಯಲ್ಲಿ ಕಾಂಗ್ರೆಸ್ ಭವನ ನಿರ್ಮಿಸಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೊಡುಗೆ ನೀಡಿರುವ ಬಗ್ಗೆ ಸಿಎಲ್ಪಿ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೊಗಳಿದಾಗ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯದಲ್ಲಿ 100 ಗಾಂಧಿ ಭಾರತ್ ಕಚೇರಿ ನಿರ್ಮಿಸುವ ಗುರಿ ಕುರಿತ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ವಿಷಯ ಪ್ರಸ್ತಾಪಿಸಿದ್ದಾರೆ. ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸ್ ಕಚೇರಿಯನ್ನು ಚೆನ್ನಾಗಿ ಕಟ್ಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಸತೀಶ್ ಜಾರಕಿಹೊಳಿ, ಬೇರೆ ಯಾರೂ ಪಕ್ಷದ ಕೆಲಸ ಮಾಡಿರುವುದು ನಿಮಗೆ ಕಾಣುವುದಿಲ್ಲ. ಬೆಳಗಾವಿಯಲ್ಲಿ ಪಕ್ಷದ ಕಚೇರಿಗೆ ನಾನೂ 3 ಕೋಟಿ ರೂಪಾಯಿ ಕೊಟ್ಟಿದ್ದೇನೆ. ನನ್ನ ಸಹೋದರ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಲ್ಲಿದ್ದಾಗ 50 ಲಕ್ಷ ರೂ. ನೀಡಿದ್ದರು. ನಿವೇಶನ ಖರೀದಿಸಲಾಗಿತ್ತು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಭವನ ನಿರ್ಮಿಸಿದ ವಿಚಾರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಡಿಸಿಎಂ ಹೊಗಳಿದಕ್ಕೆ ಸತೀಶ್ ಜಾರಕಿಹೊಳಿ ಸಿಟ್ಟಿನಿಂದ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.