ಉಡುಪಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಏಕಾಏಕಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಮರು ಸೇರ್ಪಡೆಯಾಗಿರುವುದು ಅಚ್ಚರಿ ತಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶೆಟ್ಟರ್ ಚುನಾವಣೆಯಲ್ಲಿ ಸೋತಿದ್ದರೂ ಅವರನ್ನು ಎಂಎಲ್ ಸಿ ಮಾಡಿದ್ದೆವು. ಈಗ ಇದ್ದಕ್ಕಿದ್ದಂತೆ ಪಕ್ಷ ಬಿಟ್ಟು ಬಿಜೆಪಿ ಸೇರಿರುವುದು ನನಗೆ ದಿಗ್ಭ್ರಮೆ ತಂದಿದೆ. ಶೆಟ್ಟರ್ ಕಾಂಗ್ರೆಸ್ ಗೆ ಬಂದಿದ್ದು ಯಾಕೆ? ಈಗ ಹೋಗಿದ್ದು ಯಾಕೆ? ಈ ರೀತಿಯ ಸ್ಥಿತಿ ರಾಜಕೀಯದಲ್ಲಿ ಆಗಬಾರದು ಎಂದು ಹೇಳಿದರು.
ಬಿಜೆಪಿಯಲ್ಲಿ ಅವಮಾನವಾಯ್ತು ಎಂದು ಕಾಂಗ್ರೆಸ್ ಗೆ ಅವರಾಗಿಯೇ ಬಂದ್ರು. ನಾವು ಅವರಿಗೆ ಟಿಕೆಟ್ ಕೊಟ್ಟೆವು. ನಮ್ಮ ಕರ್ಯಕರ್ತರು ಹಗಲು-ರಾತ್ರಿ ದುಡಿದು ಅವರಿಗೆ ತ್ಯಾಗ ಮಾಡಿದರು. ಆದರೆ ಚುನಾವಣೆಯಲ್ಲಿ ಸೋತರು. ಸೋತರೂ ಸಮಸ್ಯೆಯಾಗಬಾರದು ಅವರಿಗೆ ಅನುಕೂಲವಾಗಬೇಕು ಎಂದು ಎಂಎಲ್ ಸಿ ಮಾಡಿದೆವು. ಕಾಂಗ್ರೆಸ್ ನಲ್ಲಿ ಅವರಿಗೆ ಯಾವುದೇ ತೊಂದರೆ ಇರಲಿಲ್ಲ. ಆದಾಗ್ಯೂ ಯಾಕೆ ಪಕ್ಷವನ್ನು ಬಿಟ್ಟು ಹೋಗಿದ್ದಾರೆ ಗೊತ್ತಿಲ್ಲ. ರಾಜಕೀಯದಲ್ಲಿ ತತ್ವ ಸಿದ್ಧಾಂತ, ನೀತಿ-ನಿಯಮ ಎಲ್ಲವನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಈ ರೀತಿ ಬಂದ ಪುಟ್ಟ ಹೋದ ಪುಟ್ಟ ಆಗಬಾರದು ಎಂದು ಕಿಡಿಕಾರಿದರು.