ಬೆಳಗಾವಿ: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದ ಬೆನ್ನಲ್ಲೇ ಬೆಳಗಾವಿಯಲ್ಲಿಯೂ ಬಾಣಂತಿಯರು ಹಾಗೂ ಶಿಶುಗಳ ಸಾವು ಸಂಭವಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಪ್ರಕರಣ ಮುಚ್ಚಿಡುವ ಪ್ರಶ್ನೆ ಇಲ್ಲ ಎಂದಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿರುವ ಬಾಣಂತಿಯರು, ಶಿಶುಗಳ ಸಾವಿನ ಪ್ರಕರಣವನ್ನು ಮುಚ್ಚಿಡುವ ಪ್ರಶ್ನೆ ಇಲ್ಲ. ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಯಾಕೆ ಸಮಸ್ಯೆಯಾಗಿದೆ, ಸಾವು ಹೇಗೆ ಸಂಭವಿಸಿದೆ ಎಂಬ ಬಗ್ಗೆ ಚರ್ಚಿಸಿದ್ದೇನೆ ಎಂದರು.
ಸಾವನ್ನ ತಡೆಯಲು ಯಾವ ಕ್ರಮಕೈಗೊಳ್ಳಬೇಕು. ಏನೆಲ್ಲ ಮಾಡಬೇಕು ಅದನ್ನ ಮಾಡುತ್ತಿದ್ದೇವೆ. ನಮ್ಮ ಜಿಲ್ಲೆಯಲ್ಲಿ 54 ಲಕ್ಷ ಜನಸಂಖ್ಯೆ ಇದೆ. ಹೀಗಾಗಿ ಅಂಕಿ ಅಂಶ ಹೆಚ್ಚಾಗಿ ಕಾಣುತ್ತಿದೆ. ಕಾರವಾರ ಸೇರಿದಂತೆ ಅನೇಕ ಕಡೆಗಳಿಂದ ಬೆಳಗಾವಿ ಆಸ್ಪತ್ರೆಗೆ ಬರುತ್ತಾರೆ. ಬಾಣಂತಿರು, ಹಸಿಗೂಸುಗಳ ಸಾವಿಗೆ ಬಹಳಷ್ಟು ಕಾರಣಗಳಿವೆ. ಬಳ್ಳಾರಿ ಪ್ರಕರಣಗಳಿಗೂ, ಬೆಳಗಾವಿ ಬಿಮ್ಸ್ ಗೂ ಸಂಬಂಧ ಇಲ್ಲ. ಕಬ್ಬಿನಾಂಶ ಕೊರತೆ, ಪ್ರೀ ಮೆಚ್ಯುರ್ ಬೇಬಿ ಹೀಗೆ ಅನೇಕ ಕಾರಣಗಳಿಂದ ಸಾವಾಗಿದೆ. ಒಂದು ಲಕ್ಷ ಮಕ್ಕಳು ಹುಟ್ಟಿದರೆ 28 ಮಕ್ಕಳು ಅದರಲ್ಲಿ ತೀರಿಕೊಳ್ಳುತ್ತಿದ್ದಾರೆ. ಇಡೀ ದೇಶಕ್ಕೆ 6ನೇ ಅತ್ಯುತ್ತಮ ಆಸ್ಪತ್ರೆ ಬಿಮ್ಸ್. ಬಾಣಂತಿಯರು, ಶಿಶುಗಳ ಸಾವಿಗೆ ಇಂಥದ್ದೇ ಕಾರಣ ಅಂತ ಈಗಲೇ ಹೇಳಲಾಗದು ಎಂದು ತಿಳಿಸಿದರು.