alex Certify ರೈತರ ಮನವಿಗೆ ಸ್ಪಂದನೆ: ಇನ್ನೂ 15 ದಿನ ಕಾಲುವೆಗಳಿಗೆ ನೀರು ಹರಿಸಲು ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಮನವಿಗೆ ಸ್ಪಂದನೆ: ಇನ್ನೂ 15 ದಿನ ಕಾಲುವೆಗಳಿಗೆ ನೀರು ಹರಿಸಲು ಆದೇಶ

ಧಾರವಾಡ: ಮಲಪ್ರಭಾ ಜಲಾಶಯದಿಂದ ಕಾಲುವೆಗಳಿಗೆ ಹರಿಬಿಡಲಾಗಿರುವ ನೀರನ್ನು ಫೆಬ್ರವರಿ 15ರಿಂದ ಸ್ಥಳಗಿತಗೊಳಿಸುವ ನಿರ್ಧಾರವನ್ನು ರೈತರ ಬೇಡಿಕೆಯ ಹಿನ್ನೆಲೆಯಲ್ಲಿ ಕೈಬಿಟ್ಟು ಮಾರ್ಚ್ 1ರ ವರೆಗೂ ನೀರು ಬಿಡುವಂತೆ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆದೇಶಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 15ರಂದು ಜರುಗಿದ್ದ ಸಭೆಯಲ್ಲಿ ಶಾಸಕರು, ಮಹಾಮಂಡಳದ ಅಧ್ಯಕ್ಷರು, ರೈತರು ಮುಖಂಡರೊಂದಿಗೆ ಚರ್ಚಿಸಿ, ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ 2024-25ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗಾಗಿ 14.87 ಟಿ.ಎಂ.ಸಿ ಹಾಗೂ ಹಿಂಗಾರು ಹಂಗಾಮಿಗೆ 16 ಟಿ.ಎಂ.ಸಿ ಹೀಗೆ ಒಟ್ಟಾರೆಯಾಗಿ 30.842 ಟಿ.ಎಂ.ಸಿ ನೀರನ್ನು ಮಲಪ್ರಭಾ ಜಲಾಶಯದಿಂದ ನೀರಾವರಿಗಾಗಿ ಒದಗಿಸಲಾಗಿದೆ.

ಅದರಂತೆ ಮಲಪ್ರಭಾ ಜಲಾಶಯದಿಂದ ನೀರಾವರಿಗಾಗಿ ಒಳಪಡುವ ಕಾಲುವೆಗಳ ಮುಖಾಂತರ ಫೆಬ್ರವರಿ 14ರ ವರೆಗೆ 16 ಟಿಎಂಸಿ ನೀರನ್ನು ನೀರಾವರಿ ಉದ್ದೇಶಕ್ಕೆ ರೈತರಿಗೆ ಬಿಡುಗಡೆ ಮಾಡಲಾಗಿದೆ.

ಪ್ರಸ್ತುತ ಎರಡೂ ಹಂಗಾಮುಗಳು ಮುಗಿದಿದ್ದರೂ ಸಹ, ನರಗುಂದ ಹಾಗೂ ಬಾದಾಮಿ ಶಾಸಕರು ಹಾಗೂ ರೈತ ಮುಖಂಡರು ನೀರನ್ನು ಕಾಲುವೆಗಳಿಗೆ ಮಾರ್ಚ್ 15ರವರೆಗೆ ಮುಂದುವರಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಲ್ಲಿ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಫೆಬ್ರವರಿ 15ಕ್ಕೆ ಸ್ಥಗಿತಗೊಳಿಸಬೇಕಾಗಿದ್ದ ನೀರನ್ನು ಮಾರ್ಚ್ 1ರ ವರೆಗೆ ನೀರಾವರಿ ಕಾಲುವೆಗಳ ಮುಖಾಂತರ ಹರಿಸುವುದನ್ನು ಮುಂದುವರೆಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ಅಲ್ಲದೆ, ಅವಶ್ಯಕ ಕುಡಿಯುವ ನೀರಿಗಾಗಿ ಜೂನ್ ಅಂತ್ಯದವರೆಗೆ 15 ಟಿ.ಎಂ.ಸಿ ನೀರನ್ನು ಕಾಯ್ದಿರಿಸಿ ಒದಗಿಸಲು ಸಚಿವರು ಸೂಚಿಸಿದ್ದಾರೆ. ಜೊತೆಗೆ, ಮಾರ್ಚ್ 1ರೊಳಗಾಗಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕುಡಿಯುವ ನೀರಿಗಾಗಿ ತಮ್ಮ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದೂ ಸಚಿವರು ಸೂಚಿಸಿದ್ದಾರೆ.

ಪ್ರಸಕ್ತ ಬೇಸಿಗೆಯ ತೀವ್ರತೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಬೇಡಿಕೆ ಹೆಚ್ಚಾಗುವುದರಿಂದ ಹಿತ- ಮಿತವಾಗಿ ನೀರನ್ನು ಬಳಸುವಂತೆ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆಗಿರುವ ನವಿಲುತೀರ್ಥದ ಅಧೀಕ್ಷಕ ಅಭಿಯಂತರ ವಿ.ಎಸ್. ಮಧುಕರ ಮನವಿ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...