ಬೆಳಗಾವಿ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಚಿವರನ್ನು ನೋಡಿ, ಆರೋಗ್ಯ ವಿಚಾರಿಸಲೆಂದು ಬರುವರ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದಾಗಿ ಅವರಿಗೆ ಒತ್ತಡವುಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ವೈದ್ಯ ಡಾ.ರವಿ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನೋಡಲೆಂದು ಆಸ್ಪತ್ರೆಗೆ ದಯವಿಟ್ಟು ಯಾರೂ ಬರಬೇಡಿ ಎಂದು ಮನವಿ ಮಾಡಿದ್ದಾರೆ.
ಹೆಚ್ಚು ಜನರು ಬರುತ್ತಿರುವುದರಿಂದ ಅವರಿಗೆ ತೊಂದರೆಯಾಗುತ್ತಿದೆ. ತಲೆ ನೋವು, ತಲೆ ಸುತ್ತುಬರುವುದು ನಿನ್ನೆಯಿಂದ ಹೆಚ್ಚಾಗಿತ್ತು. ಅವರಿಗೆ ವಿಶ್ರಾಂತಿ ಅಗತ್ಯವಿದೆ. ಹಾಗಾಗಿ ಯಾರೂ 48 ಗಂಟೆಗಳ ಕಾಲ ಆಸ್ಪತ್ರೆಗೆ ಬರಬೇಡಿ ಎಂದು ತಿಳಿಸಿದರು.
ಕುತ್ತಿಗೆಯ ಭಾಗಕ್ಕೆ ಹಾಗೂ ಬೆನ್ನುಹುರಿಗೆ ಪೆಟ್ಟು ಬಿದ್ದಿದ್ದರಿಂದ ಅವರಿಗೆ ತೊಂದರೆ ಆಗುತ್ತಿದೆ. ಬಂದವರ ಬಳಿ ಮಾತನಾಡುತ್ತಿರುವುದರಿಂದ ಅವರಿಗೆ ಇನ್ನಷ್ಟು ತೊಂದರೆಯಾಗುತ್ತಿದೆ, ಸಚಿವರಿಗೆ ಸದ್ಯ 12 ರಿಂದ 14 ಗಂಟೆ ನಿದ್ದೆಗೆ ಅವಕಾಶ ನೀಡಬೇಕು. ನಾವು ಚಿಕಿತ್ಸೆ ನೀಡುತ್ತಿದ್ದೇವೆ ಉತ್ತಮವಾಗಿ ಚಿಕಿತ್ಸೆಗೆ ಸ್ಪಂದಿಸುತಿದ್ದಾರೆ. ಅವರು ಶೀಘ್ರವೇ ಗುಣಮುಖರಾಗುತ್ತಾರೆ. ರಾಜಕಾರಣಿಗಳೂ ಭೇಟಿಗೆ ಬರಬೇಡಿ. 48 ಗಂಟೆಗಳ ಕಾಲ ಅವರಿಗೆ ಯಾರೂ ತೊಂದರೆ ಮಾಡಬೇಡಿ ಎಂದು ಮನವಿ ಮಾಡಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಗ ಮೃಣಾಲ್ ಅವರು ಆಸ್ಪತ್ರೆಯಲ್ಲಿ ಇರ್ತಾರೆ. ಬರೋರು ಅವರಿಗೆ ಭೇಟಿಯಾಗಿ ಮಾತನಾಡಿ ಹೊರತು ಚಿಕಿತ್ಸೆ ಪಡೆಯುತ್ತಿರುವ ಸಚಿವರನ್ನು ಭೇಟಿಯಾಗಿ ತೊಂದರೆ ಕೊಡಬೇಡಿ ಎಂದು ಹೇಳಿದರು.