ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವಾಚ್ಯ ಪದ ಬಳಕೆ ಮಾಡಿದ ಆರೋಪ ಕೇಳಿ ಬಂದಿದೆ.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಿ.ಟಿ. ರವಿ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಈಗಾಗಲೇ ಸಭಾಪತಿಗೆ ದೂರು ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್, ಹಿರೇ ಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಿ.ಟಿ. ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಕೂಡ ಸಭಾಪತಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಸಿ.ಟಿ. ರವಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಹಿರೇಬಾಗೇವಾಡಿ ಠಾಣೆ ಪೊಲೀಸರಿಗೆ ತಮ್ಮದೇ ಲೆಟರ್ ಹೆಡ್ ನಲ್ಲಿ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಅವರ ದೂರಿನ ಮೇರೆಗೆ ಬಿಎನ್ಎಸ್ ಕಾಯ್ದೆ 75 ಮತ್ತು 79ರ ಅಡಿಯಲ್ಲಿ ಕೇಸು ದಾಖಲಾಗಿದೆ. ಲೈಂಗಿಕ ಕಿರುಕುಳ, ಮಹಿಳೆಯ ಇಚ್ಛೆಯ ವಿರುದ್ಧ ಅಶ್ಲೀಲತೆ ತೋರುವುದು, ಮಹಿಳೆಯರ ನಮ್ರತೆ ಅವಮಾನಿಸುವ ಉದ್ದೇಶದಿಂದ ಸನ್ನೆ, ಪದ ಅಥವಾ ಕ್ರಿಯೆ, ಬಣ್ಣದ ಟೀಕೆ ಎಂಬುದು ಸೇರಿ ಬಿಎನ್ಎಸ್ ಕಾಯ್ದೆಯಡಿ ಹಿರೇ ಬಾಗೇವಾಡಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.