ಬೆಳಗಾವಿ: ಬಿಜೆಪಿಯವರು ಇಡೀ ಹೆಣ್ಣುಕುಲಕ್ಕೆ ಅಪಮಾನ ಮಾಡಿದ್ದಾರೆ. ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಅಂದಿದ್ರೆ ಸುಮ್ಮನಿರ್ತಿದ್ರಾ? ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಸಿ.ಟಿ.ರವಿ ಅವರ ಆ ಪದ ಬಳಕೆಯಿಂದ ನನಗೆ ಸಾಕಷ್ಟು ನೋವಾಗಿದೆ. ಆಘಾತದಿಂದ ಹೊರ ಬರಲು ಎರಡುದಿನ ಬೇಕಾಯಿತು. ಅವರ ವಿರುದ್ಧ ಹೋರಾಟವನ್ನು ಮುದುವರೆಸುತ್ತೇನೆ. ನ್ಯಾಯಕ್ಕಾಗಿ ಹೋರಾಡುತ್ತೇನೆ ಇದನ್ನು ಇಲ್ಲಿಗೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದರು.
ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ಬಗ್ಗೆ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಪತ್ರದ ಮೂಲಕ ದೂರು ನೀಡುತ್ತೇನೆ. ಸಾಧ್ಯವಾದರೆ ನಾನೇ ಸ್ವತಃ ಪ್ರಧಾನಿ ಹಾಗೂ ರಾಷ್ಟ್ರಪತಿಗಳನ್ನು ಭೇಟಿಯಾಗುತ್ತೇನೆ ಎಂದರು.
ಅಂದು ಸಿ.ಟಿ.ರವಿ ಪರಿಷತ್ ನಲ್ಲಿ ಯಾವ ಪದ ಬಳಕೆ ಮಾಡಿದರು, ಏನೆಲ್ಲ ಘಟನೆ ಆಯಿತು ಎಂಬ ಬಗ್ಗೆ ವಿಡಿಯೋ ಬಿಡುಗಡೆ ಮಾಡುತ್ತೇನೆ. ಸಭಾಪತಿಗಳಿಗೆ ಮತ್ತೊಮ್ಮೆ ದೂರು ನೀಡುತ್ತೆನೆ. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದರು.
ಅಂದು ಎಲ್ಲಾ ಬಿಜೆಪಿ ಸದಸ್ಯರು ಪರಿಷತ್ ನಲ್ಲಿ ಇದ್ದರು. ನಾಲ್ಕು ಜನ ಬಂದು ಮಾತ್ರ ನನಗೆ ಸಾರಿ ಕೇಳಿದ್ದಾರೆ. ಬಿಜೆಪಿ ನಾಯಕರೆಲ್ಲರೂ ಸಿ.ಟಿ.ರವಿ ಪರ ನಿಂತಿದ್ದಾರೆ. ಹಾರಾ ತುರಾಯಿ ಹಾಕಿಸಿಕೊಂಡು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ಹೆಣ್ಣು ಕುಲಕ್ಕೆ ಅಪಮಾನ ಮಾಡಿದ್ದಾರೆ. ಹೆಣ್ಣಿನ ಬಗ್ಗೆ ಬಿಜೆಪಿಯವರಿಗೆ ಯಾವುದೇ ಗೌರವವಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಹೇಳಿದ್ರೆ ಸುಮ್ಮನಿರ್ತಿದ್ರಾ? ನಾನು ಚಿಕ್ಕಮಗಳೂರಿಗೆ ಬಂದು ಹೀಗೆ ಹೇಳಿದ್ರೆ ನೀವು ಸುಮ್ಮನಿರ್ತಿದ್ರಾ? ಎಂದು ಪ್ರಶ್ನಿಸಿದ್ದಾರೆ.