ಬೆಳಗಾವಿ: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಲಕ್ಷ್ಮೀ ಹೆಬ್ಬಾಳ್ಕರ್,16 ವರ್ಷದ ಹೆಣ್ನುಮಕ್ಕಳಿಂದ 50 ವರ್ಷದವರೆಗಿನ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ ಎಂದು ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, 300-400 ಹೆಣ್ಣುಮಕ್ಕಳ ಮೇಲೆ ವಿಕೃತಿ ಮೆರೆದಿದ್ದಾರೆ. ಮನೆ ಕೆಲಸದವರು, ಪೊಲೀಸ್ ಅಧಿಕಾರಿಗಳು, ಸೇರಿದಂತೆ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ. ಹೆದರಿಸಿ ಬೆದರಿಸಿ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ರೇವಣ್ಣ, ಕುಮಾರಸ್ವಾಮಿ ಎಲ್ಲರೂ ಅಧಿಕಾರದಲ್ಲಿದ್ದವರು ಎಂದು ವಾಗ್ದಾಳಿ ನಡೆಸಿದ್ದಾರೆ.
ಹೆಚ್.ಡಿ.ರೇವಣ್ಣ ಮುಖ್ಯ ಆರೋಪಿ. ಪ್ರಜ್ವಲ್ ರೇವಣ್ಣ ಎರಡನೇ ಆರೋಪಿ. ನನಗೆ ವಿದೇಶದಿಂದ ಫೋನ್ ಕರೆಗಳು ಬರುತ್ತಿವೆ. ಒತ್ತಡ ಹೇರುವ ಯತ್ನ. ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಇಷ್ಟೆಲ್ಲ ಪ್ರಕರಣ ನಡೆದರೂ ಬಿಜೆಪಿ ನಾಯಕರು ಯಾಕೆ ಸುಮ್ಮನಿದ್ದಾರೆ? ಬಿಜೆಪಿಯ ಧೀಮಂತ ನಾಯಕರಿಗೆ ಈ ಹೆಣ್ಣುಮಕ್ಕಳು ಕಾಣಿಸುತ್ತಿಲ್ಲವೇ? ಪ್ರಧಾನಿ ಮೋದಿ ರಾಜ್ಯದ ಎರಡು ಮೂರು ವಿಚಾರಗಳನ್ನು ಪ್ರಸ್ತಾಪ ಮಾಡುತ್ತಾರೆ. ಆದರೆ ಪ್ರಜ್ವಲ್ ರೇವಣ್ಣ ಪ್ರಕರಣ ಯಾಕೆ ಮಾತನಾಡುತ್ತಿಲ್ಲ? ಇಂತವರಿಂದ ಮಹಿಳೆಯರ ರಕ್ಷಣೆ ಸಾಧ್ಯವೇ? ಮೋದಿ ಹೇಳುವ ಬೇಟಿ ಬಚಾವೋ, ಬೇಟಿ ಪಡಾವೋ ಬರೀ ಘೋಷಣೆಯಷ್ಟೆಯೇ? ಎಂದು ಪ್ರಶ್ನಿಸಿದ್ದಾರೆ.