![](https://kannadadunia.com/wp-content/uploads/2024/04/lakshmi-hebbalkar-.jpg)
ಬೆಳಗಾವಿ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂಪೂರ್ಣ ಗುಣಮುಖರಾಗಿದ್ದು, ಇನ್ನೆರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ಮರಳುವುದಾಗಿ ತಿಳಿಸಿದ್ದಾರೆ.
ಬೆಳಗಾವಿಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ದೇವರ ದಯೆಯಿಂದ ಸಂಪೂರ್ಣ ಗುಣಮುಖಳಾಗಿದ್ದೇನೆ. ವೈದ್ಯರು 6 ವಾರ ವಿಶ್ರಾಂತಿ ಹೇಳಿದ್ದಾರೆ. ಹಾಗಾಗಿ ಇನ್ನೆರಡು ವಾರಗಳಲ್ಲಿ ಪ್ರಯಾಣ ಆರಂಭಿಸಿ, ಕೆಲಸ ಕಾರ್ಯಗಳನ್ನು ಆರಂಭಿಸುತ್ತೇನೆ ಎಂದರು.
ಅಪಘಾತದ ಬಳಿಕ ಒಂದು ತಿಂಗಳು ತುಂಬಾ ಕಷ್ಟಕರವಾಗಿತ್ತು. ಈಗ ಗುಣಮುಖಳಾಗಿದ್ದು, ಶೀಘ್ರವೇ ಜನ ಸೇವೆಗೆ ಮರಳುವೆ ಎಂದು ಹೇಳಿದರು.
ಕಳೆದ 25 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದೇನೆ. ಜನರ ಮಧ್ಯೆಯೇ ನನ್ನ ದೈನಂದಿನ ಜೀವನ ನಡೆಯುತ್ತಿದೆ. ಈಗಲೂ ದೂರವಾಣಿ ಮೂಲಕ ಜನರ ಸಂಪರ್ಕದಲ್ಲಿದ್ದೇನೆ. ಜನರು ಹಾಗೂ ದೇವರ ಆಶೀರ್ವಾದದಿಂದ ಸಂಪೂರ್ಣ ಗುಣಮುಖಳಾಗಿದ್ದೇನೆ ಎಂದರು.