ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಸಚಿವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಬೆನ್ನಲ್ಲೇ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ, ಮನೆಯಲ್ಲಿ ದುರ್ಘಟನೆ ಸಂಭವಿಸಬಹುದು ಎಂದು ನಮಗೆ ಬೇಕಾದವರೊಬ್ಬರು ಭವಿಷ್ಯ ನುಡಿದ್ದರು ಎಂದಿದ್ದಾರೆ.
ಬೆಳಗಾವಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚನ್ನರಾಜ ಹಟ್ಟಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚೇತರಿಸಿಕೊಳ್ಳುತ್ತಿದ್ದಾರೆ. ಬಲವಾಗಿ ಪೆಟ್ಟು ಬಿದ್ದಿರುವುದರಿಂದ ಹೆಚ್ಚು ಮಾತನಡಲು ಸದ್ಯವಾಗುತ್ತಿಲ್ಲ. ಆದರೂ ಅವರು ಧೈರ್ಯವಾಗಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.
ಮನೆಯಲ್ಲಿ ದುರ್ಘಟನೆ ಸಂಭವಿಸಬಹುದು ಸಂಕ್ರಾಂತಿವರೆಗೆ ತೊಂದರೆಯಿದೆ ಎಚ್ಚರವಾಗಿರುವಂತೆ ಬೆಳಗವೈಯಲ್ಲಿ ನಮಗೆ ಬೇಕಾದವರೊಬ್ಬರು ಈ ಹಿಂದೆಯೇ ಭವಿಷ್ಯ ನುಡಿದಿದ್ದರು. ಯಾವುದೋ ಕಂಟಕ ಇಷ್ಟರಲ್ಲಿಯೇ ಕಳೆದಿದೆ ಎಂದು ಹೇಳಿದರು.
ನಿನ್ನೆ ಸಿಎಲ್ ಪಿ ಮೀಟಿಂಗ್ ಮುಗಿದ ಬಳಿಕ ರಾತ್ರಿ ಬೆಂಗಳೂರಿನಿಂದ ಕಾರಿನಲ್ಲಿ ಬೆಳಗಾವಿಗೆ ಹೊರಟಿದ್ದೆವು. ಕಾರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನಾನು ಹಾಗೂ ಓರ್ವ ಗನ್ ಮ್ಯಾನ್ ಹಾಗೂ ಚಾಲಕ ನಾವರು ಇದ್ದೆವು. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಬೆಳಗಾವಿಗೆ ತಲುಪಲು ಇನ್ನೇನು 15 ನಿಮಿಷವಿದೆ ಎನ್ನುವಾಗ ರಸ್ತೆಯಲ್ಲಿ ಎರಡು ನಾಯಿಗಳು ಒಂದರಹಿಂದೆ ಒಂದು ಅಡ್ಡಬಂದಿವೆ. ಅವುಗಳನ್ನು ತಪ್ಪಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ ಎಂದು ಘಟನೆ ಬಗ್ಗೆ ವಿವರಿಸಿದರು.