ನವದೆಹಲಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಕೈಕೊಟ್ಟು ಬಿಜೆಪಿಗೆ ವಾಪಾಸ್ ಆಗಿರುವ ಬೆನ್ನಲ್ಲೇ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೂಡ ಬಿಜೆಪಿಗೆ ಮರಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಎಲ್ಲಾ ಊಹಾಪೋಹಗಳಿಗೂ ಸ್ವತಃ ಲಕ್ಷ್ಮಣ ಸವದಿ ತೆರೆ ಎಳೆದಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, ಕಾಂಗ್ರೆಸ್ ಗೆ ಮೊದಲು ಬಂದಿದ್ದು ನಾನು ಆ ನಂತರದಲ್ಲಿ ಜಗದೀಶ್ ಶೆಟ್ಟರ್ ಬಂದಿದ್ದಿದ್ದರು. ಈಗ ಮತ್ತೆ ಬಿಜೆಪಿಗೆ ಹೋಗಿದ್ದಾರೆ. ಶೆಟ್ಟರ್ ಬಿಜೆಪಿಗೆ ಹೋದ ಮಾತ್ರಕ್ಕೆ ನಾನ್ಯಾಕೆ ಮತ್ತೆ ಬಿಜೆಪಿಗೆ ಹೋಗಬೇಕು? ಅವರ ವಿಚಾರ ಅವರಿಗೆ. ನಮ್ಮ ವಿಚಾರ ನಮಗೆ ಎಂದಿದ್ದಾರೆ.
ಅಂದು ನನಗೆ ಬಿಜೆಪಿಯಲ್ಲಿ ಆದ ನೋವು, ಅವಮಾನ ಸಹಿಸಿಕೊಂಡು ಇದ್ದೆ. ಕೊನೆಗೆ ಅನಿವಾರ್ಯವಾಗಿ ಆ ಪಕ್ಷವನ್ನೇ ಬಿಟ್ಟು ಕಾಂಗ್ರೆಸ್ ಗೆ ಬಂದೆ. ಕಾಂಗ್ರೆಸ್ ನನಗೆ ಅತ್ಯಂತ ಗೌರವದಿಂದ ಬರಮಾಡಿಕೊಂಡಿದೆ. ಆಶ್ರಯವನ್ನು ನೀಡಿದೆ. ಅಥಣಿ ಕ್ಷೇತ್ರದ ಜನರು ನನ್ನನ್ನು ಕಾಂಗ್ರೆಸ್ ನಿಂದ ಆಯ್ಕೆ ಮಾಡಿದ್ದಾರೆ. ಸಿಎಂ, ಡಿಸಿಎಂ ಎಲ್ಲರೂ ಗೌರವದಿಂದ ನಡೆಸಿಕೊಳ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಕ್ಷ ಬಿಟ್ಟು ಮತ್ತೆ ಬಿಜೆಪಿಗೆ ವಾಪಾಸ್ ಹೋಗಲು ನನಗೇನು ಹುಚ್ಚಾ? ಎಂದು ಗರಂ ಆದರು.
ಲಕ್ಷ್ಮಣ ಸವದಿ ಮೈಯಲ್ಲಿ ಬಿಜೆಪಿ ಡಿಎನ್ ಎ ಇದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸವದಿ, ನನ್ನ ತಂದೆಯ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ. ಬೇರೆ ಯಾರದ್ದೋ ಡಿಎನ್ ಎ ತಂದು ನನಗೆ ಹಚ್ಚೋಕೆ ಬರಬೇಡಿ ಎಂದು ಕಿಡಿಕಾರಿದರು.