ಬೆಳಗಾವಿ: ಟಿಕೆಟ್ ಕೈತಪ್ಪಿದ್ದಕ್ಕೆ ಪಕ್ಷ ಬಿಡುತ್ತಿಲ್ಲ, ಅನೇಕ ಮುಖಂಡರು ನನ್ನನ್ನು ನಿರ್ಲಕ್ಷ ಮಾಡಿದ್ದಕ್ಕೆ ಬೇಸರವಾಗಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಅಥಣಿಯಲ್ಲಿ ಮಾತನಾಡಿದ ಅವರು, ನನಗೆ ಆಂತರಿಕವಾಗಿ ಬಹಳಷ್ಟು ನೋವು ಮತ್ತು ಹಿಂಸೆಯಾಗಿದೆ. ಪಕ್ಷ ನನ್ನ ತಾಯಿ ಎಂದು ಸುಮ್ಮನಿದ್ದೆ. ರಾಷ್ಟ್ರೀಯ ನಾಯಕರು ಬಂದಾಗ ವೇದಿಕೆ ಹಂಚಿಕೊಳ್ಳಲು ಆಗಲಿಲ್ಲ. ಯಾವುದೇ ಸೂಚನೆ ನೀಡದೆ ಉಪಮುಖ್ಯಮಂತ್ರಿ ಸ್ಥಾನದಿಂದ ತೆಗೆದರೂ ಸುಮ್ಮನಿದ್ದೆ. ಯಾವತ್ತೂ ಪಕ್ಷ ವಿರೋಧಿ ಚಟುವಟಿಕೆ, ಟೀಕೆ ಟಿಪ್ಪಣಿ ಮಾಡಿಲ್ಲ ಎಂದರು.
ಹೊಸದಾಗಿ ಪಕ್ಷಕ್ಕೆ ಬಂದವರ ಮೇಲೆ ಈಗ ಮೋಹ ಹೆಚ್ಚಾಗಿದೆ ಎಂದು ಪರೋಕ್ಷವಾಗಿ ರಮೇಶ ಜಾರಕಿಹೊಳಿ ವಿರುದ್ಧ ಸವದಿ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯ ಗುರು ಬಿ.ಎಲ್. ಸಂತೋಷ್ ಅವರು ಕರೆ ಮಾಡಿದರೂ ಸ್ವೀಕರಿಸಿಲ್ಲ. ಗುರುವಿನ ಮನಸ್ಸಿಗೆ ನೋವು ಆಗಬಾರದು ಎಂದು ಕರೆ ಸ್ವೀಕರಿಸಲಿಲ್ಲ. ಇದೇ ಕಾರಣಕ್ಕೆ ನಾನು ಮೊದಲೇ ಕ್ಷಮೆಯಾಚಿಸಿದ್ದೇನೆ ಎಂದರು.
ನಾಳೆ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾಳೆಯೇ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.