ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಸೆಳೆಯಲು ಬಿಜೆಪಿ ಕಾರ್ಯ ತಂತ್ರ ರೂಪಿಸಿದೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ನಿರಾಕರಿಸಿದ್ದರಿಂದ ಬಿಜೆಪಿ ಬಿಟ್ಟಿದ್ದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಸೇರಿದಂತೆ ಹಲವು ನಾಯಕರನ್ನು ಮರಳಿ ಕರೆತರಲು ರಹಸ್ಯ ಕಾರ್ಯತಂತ್ರ ರೂಪಿಸಿದ್ದು, ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರ ಮೊದಲ ಪ್ರಯತ್ನದಲ್ಲಿಯೇ ಸೈಲೆಂಟ್ ಆಪರೇಷನ್ ನಡೆಸಿ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಕೂಡ ನಡೆದಿದೆ. ನನ್ನ ಹೆಣ ಕೂಡ ಬಿಜೆಪಿಗೆ ಮರಳಿ ಹೋಗುವುದಿಲ್ಲ ಎಂದು ಹಿಂದೆ ಆಕ್ರೋಶ ವ್ಯಕ್ತಪಡಿಸಿದ್ದ ಲಕ್ಷ್ಮಣ ಸವದಿ ನಿನ್ನೆ ಕೂಡ ಡಿಸಿಎಂ ಡಿಕೆಶಿ ಭೇಟಿಯಾಗಿ ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲಕ್ಷ್ಮಣ ಸವದಿಗೆ ಗಾಳ ಹಾಕಿರುವ ಬಿಜೆಪಿ ಡಬಲ್ ಆಫರ್ ನೀಡಿದೆ. ತೆರೆ ಮರೆಯಲ್ಲಿ ಲಕ್ಷ್ಮಣ ಸವದಿ ಕರೆತರುವ ಪ್ರಯತ್ನ ನಡೆಸಲಾಗಿದೆ. ವಿಧಾನಸಭೆ ಸದಸ್ಯತ್ವಕ್ಕೆ ಸವದಿ ರಾಜೀನಾಮೆ ನೀಡಿ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಬೇಕು. ಸವದಿ ಅವರ ಪುತ್ರ ಚಿದಾನಂದ ಸವದಿ ಅವರಿಗೆ ವಿಧಾನಸಭೆಗೆ ಟಿಕೆಟ್ ನೀಡಬೇಕೆಂಬ ಆಫರ್ ಇಡಲಾಗಿದ್ದು, ಸವದಿ ಈ ಡಬಲ್ ಆಫರ್ ಒಪ್ಪಿಲ್ಲ ಎನ್ನಲಾಗಿದೆ.
ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಮರಳಿ ಬಿಜೆಪಿಗೆ ತರಲು ಪ್ರಯತ್ನ ನಡೆದಿದ್ದು, ಈ ನಿಟ್ಟಿನಲ್ಲಿ ಅವರ ಆಪ್ತರ ಮೂಲಕ ಚರ್ಚೆ ನಡೆದಿದೆ ಎನ್ನಲಾಗಿದೆ.