ಬೀದರ್: ದಯವಿಟ್ಟು ಕೆಲಸಕ್ಕೆ ಹಾಜರಾಗಿ, ವೇತನ ಹೆಚ್ಚಳಕ್ಕೆ ನಾವು ಸಿದ್ಧವಿದ್ದೇವೆ ಎಂದು ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸಾರಿಗೆ ನೌಕರರು ಮುಷ್ಕರ ಕೈಗೊಂಡಿರುವ ಕುರಿತಾಗಿ ಬೀದರ್ ಜಿಲ್ಲೆ ಹುಮನಾಬಾದ್ ನಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಚುನಾವಣಾ ಆಯೋಗಕ್ಕೂ ವೇತನ ಹೆಚ್ಚಳಕ್ಕೆ ಒಪ್ಪಿಗೆ ಕೇಳಲಾಗಿದೆ ಎಂದು ತಿಳಿಸಿದ್ದಾರೆ.
ಸಾರಿಗೆ ಸಿಬ್ಬಂದಿ ಮುಷ್ಕರ ಕೈಗೊಳ್ಳುವುದಿಲ್ಲವೆಂಬ ಆಶಾಭಾವನೆ ಇತ್ತು. ಚುನಾವಣಾ ಆಯೋಗದ ಆದೇಶ ಬಂದ ಕೂಡಲೇ ವೇತನ ಹೆಚ್ಚಳ ಮಾಡಲಾಗುವುದು. ದಯವಿಟ್ಟು ಮುಷ್ಕರ ಕೊನೆಗೊಳಿಸಿ ಎಂದು ಮನವಿ ಮಾಡಿದ್ದಾರೆ.
ನಾವು ವೇತನ ಹೆಚ್ಚಳ ಮಾಡುವುದಾಗಿ ಹೇಳಿದರೂ ಮುಷ್ಕರ ಕೈಗೊಳ್ಳಲಾಗಿದೆ. ಕೆಲವರು ಬೇಕಂತಲೇ ಮುಷ್ಕರ ಇನ್ನೆರಡು ದಿನದಲ್ಲಿ ಖಾಸಗಿ ಬಸ್ ಗಳನ್ನು ಹೆಚ್ಚಿಸಲಾಗುವುದು. ಮುಷ್ಕರ ಮುಂದುವರೆದರೆ ಆದಾಯ ಬರುವುದಿಲ್ಲ. ಇದರಿಂದಾಗಿ ವೇತನ ಕೊಡಲು ಕೂಡ ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ಎಷ್ಟು ದಿನ ಮುಷ್ಕರ ಮುಂದುವರೆಸುತ್ತಾರೆಯೋ ಅಷ್ಟು ದಿನ ನಷ್ಟವಾಗುತ್ತದೆ. ಹಠಮಾರಿತನದಿಂದ ಮುಷ್ಕರ ಮಾಡಿದರೆ ನಿಮಗೆ ಕಷ್ಟವಾಗುತ್ತದೆ. ಇವತ್ತೇ ಮುಷ್ಕರ ಕೊನೆಗೊಳಿಸಿ ನಾಳೆಯಿಂದ ಕೆಲಸಕ್ಕೆ ಬನ್ನಿ ಎಂದು ಸಾರಿಗೆ ಸಿಬ್ಬಂದಿಗೆ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.
ಈ ನಡುವೆ ಸಾರಿಗೆ ನಿಗಮದ ನೌಕರರಿಗೆ ಮಾರ್ಚ್ ತಿಂಗಳ ವೇತನವನ್ನು ತಡೆ ಹಿಡಿಯಲು ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ. ಮುಷ್ಕರ ನಿರತ ಕಂಡಕ್ಟರ್, ಡ್ರೈವರ್, ಮೆಕಾನಿಕ್ ಗಳ ವೇತನವನ್ನು ಸದ್ಯಕ್ಕೆ ತಡೆಹಿಡಿಯಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ.