ಬೆಂಗಳೂರು: ಕೊರೋನಾ ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಜನತೆಗೆ ಮತ್ತೆ ಕಷ್ಟ ನೀಡುವುದಿಲ್ಲ. ಬಿಎಂಟಿಸಿ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ ಎಂದು ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬಿಎಂಟಿಸಿ ಪ್ರಯಾಣ ದರ ಹೆಚ್ಚಳಕ್ಕೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಡೀಸೆಲ್ ದರ ಹೆಚ್ಚಳ, ನೌಕರರ ಮುಷ್ಕರ ಮೊದಲಾದ ಕಾರಣದಿಂದ ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿ ಪ್ರಯಾಣ ದರ ಹೆಚ್ಚಳ ಮಾಡಬಹುದೆಂದು ಹೇಳಲಾಗಿತ್ತು.
ಆದರೆ, ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಪ್ರಯಾಣ ದರ ಹೆಚ್ಚಳ ಮಾಡುವ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗಾಗಲಿ, ನನಗಾಗಲಿ ಮನಸ್ಸಿಲ್ಲ. ಅದರ ಬಗ್ಗೆ ಗಮನಹರಿಸಿಲ್ಲ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಲಾಕ್ಡೌನ್ ತೆರವಾಗಿ ಪರಿಸ್ಥಿತಿ ಸುಧಾರಿಸಬೇಕು. ಪೂರ್ಣ ಪ್ರಮಾಣದಲ್ಲಿ ಜನ ಸಂಚಾರಕ್ಕೆ ಅವಕಾಶ ದೊರೆತ ನಂತರ ಟಿಕೆಟ್ ದರ ಹೆಚ್ಚಳ ಪ್ರಸ್ತಾವನೆಯ ಬಗ್ಗೆ ಪರಿಶೀಲಿಸಬಹುದು. ಅಲ್ಲಿಯವರೆಗೂ ದರ ಏರಿಕೆ ಮಾಡಲ್ಲ. ಸಾರಿಗೆ ಬಸ್ ಗಳಲ್ಲಿ ಬಡವರು, ಮಧ್ಯಮವರ್ಗದವರು ಸಂಚರಿಸುತ್ತಾರೆ. ಕೊರೊನಾದಿಂದ ಸಂಕಷ್ಟದಲ್ಲಿರುವ ಅಂತಹ ಜನರಿಗೆ ಪ್ರಯಾಣದರ ಹೆಚ್ಚಳ ಮಾಡಿ ಮತ್ತೆ ಕಷ್ಟ ಕೊಡುವುದಿಲ್ಲ ಎಂದು ಹೇಳಿದ್ದಾರೆ.