ನವದೆಹಲಿ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರು ಕಳೆದ ವಾರ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಮಂಗಳವಾರ ಸಂಜೆ ಜೈಲಿನಿಂದ ಹೊರ ಬಂದಿದ್ದಾರೆ.
ಅಕ್ಟೋಬರ್ 3 ರಂದು ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರು ಮತ್ತು ಪತ್ರಕರ್ತರ ಸಾವಿಗೆ ಸಂಬಂಧಿಸಿದ ಪ್ರಕರಣದ ಆರೋಪಿ ಆಶಿಶ್ ಮಿಶ್ರಾ, ಅಲಹಾಬಾದ್ ಹೈಕೋರ್ಟ್ ಘೋಷಿಸಿದ ಜಾಮೀನು ಷರತ್ತುಗಳನ್ನು ಪೂರೈಸಿದ ನಂತರ ಜೈಲಿನಿಂದ ಬಿಡುಗಡೆಗೊಂಡರು.
ಕಳೆದ ವರ್ಷ ಅಕ್ಟೋಬರ್ 3 ರಂದು, ಅಜಯ್ ಮಿಶ್ರಾ ಒಡೆತನದ ಥಾರ್ ಸೇರಿದಂತೆ ಮೂರು SUV ಗಳ ಬೆಂಗಾವಲು ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಗುಂಪಿನ ಮೇಲೆ ಹರಿದು ನಾಲ್ವರು ರೈತರಾದ ಲವ್‌ಪ್ರೀತ್ ಸಿಂಗ್(20), ದಲ್ಜೀತ್ ಸಿಂಗ್(35), ನಚತ್ತರ್ ಸಿಂಗ್(60) ಮತ್ತು ಗುರ್ವಿಂದರ್ ಸಿಂಗ್(19), ಮತ್ತು ಪತ್ರಕರ್ತ ರಮಣ್ ಕಶ್ಯಪ್(30) ಸಾವನ್ನಪ್ಪಿದ್ದರಿ. ಹಲವರು ಗಾಯಗೊಂಡಿದ್ದಾರೆ.
ನಂತರ ನಡೆದ ಹಿಂಸಾಚಾರದಲ್ಲಿ ಇಬ್ಬರು ಬಿಜೆಪಿ ನಾಯಕರಾದ ಶುಭಂ ಮಿಶ್ರಾ(26) ಮತ್ತು ಶ್ಯಾಮ್ ಸುಂದರ್(40) ಮತ್ತು ಥಾರ್ ವಾಹನದ ಚಾಲಕ ಹರಿಓಂ ಮಿಶ್ರಾ(35) ಸಾವನ್ನಪ್ಪಿದರು. ಉದ್ರಿಕ್ತರ ಗುಂಪು ಥಾರ್ ಸೇರಿದಂತೆ ಎರಡು ವಾಹನಗಳಿಗೆ ಬೆಂಕಿ ಹಚ್ಚಿತ್ತು.