ಕಾಂಗ್ರೆಸ್ ನಾಯಕರಾದ ಸಚಿನ್ ಪೈಲಟ್ ಮತ್ತು ಆಚಾರ್ಯ ಪ್ರಮೋದ್ ಅವರನ್ನು ಮೊರಾದಾಬಾದ್ ನಲ್ಲಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬಗಳನ್ನು ಭೇಟಿ ಮಾಡಲು ಲಖಿಂಪುರ್ ಖೇರಿಗೆ ತೆರಳುತ್ತಿದ್ದ ಸಚಿನ್ ಪೈಲಟ್ ಮತ್ತು ಆಚಾರ್ಯ ಪ್ರಮೋದ್ ಅವರನ್ನು ಬಂಧಿಸಲಾಗಿದೆ.
ಬೆಳಗ್ಗೆ ಹಿಂಸಾಚಾರ ಪೀಡಿತ ಲಖಿಂಪುರ್ ಖೇರಿಗೆ ಹೊರಟಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ 5 ಸದಸ್ಯರ ಕಾಂಗ್ರೆಸ್ ನಿಯೋಗವನ್ನು ಲಖನೌ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ತಡೆದರು. ಬಳಿಕ ಭೇಟಿಗೆ ಅನುಮತಿ ನೀಡಲಾಗಿದೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರೈತರ ಕುಟುಂಬಗಳನ್ನು ಭೇಟಿ ಮಾಡಲು ಸೀತಾಪುರದಿಂದ ಲಖಿಂಪುರ್ ಖೇರಿಗೆ ತೆರಳಿದ್ದಾರೆ. ಆಮ್ ಆದ್ಮಿ ಪಕ್ಷದ ನಿಯೋಗ ಕೂಡ ಈಗಾಗಲೇ ಸ್ಥಳಕ್ಕೆ ತಲುಪಿದೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ, ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ ಮತ್ತು ದೀಪೇಂದರ್ ಹೂಡಾ ಲಖಿಂಪುರ್ ಖೇರಿಯಲ್ಲಿ ಮೃತ ರೈತರ ಕುಟುಂಬವನ್ನು ಭೇಟಿಯಾಗಲಿದ್ದಾರೆ.