ನವದೆಹಲಿ: ಲಖಿಂಪುರ ಕೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರ್ ಹರಿಸಿದ ಪ್ರಕರಣದಲ್ಲಿ ಉತ್ತರಪ್ರದೇಶ ಸರ್ಕಾರ ಪಾರದರ್ಶಕವಾಗಿ ನಡೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ವಿಶೇಷ ಸಂದರ್ಶನ ನೀಡಿದ ಅವರು, ಲಖಿಂಪುರ ಕೇರಿಯಲ್ಲಿ ರೈತರ ಮೇಲೆ ಕಾರ್ ಹರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರ್ಕಾರ ಪಾರದರ್ಶಕವಾಗಿ ನಡೆದುಕೊಂಡಿದೆ. ಸುಪ್ರೀಂ ಕೋರ್ಟ್ ಯಾವ ಸಮಿತಿಯನ್ನು ರಚಿಸಲು ಬಯಸುತ್ತದೆಯೋ, ಯಾವ ನ್ಯಾಯಾಧೀಶರು ತನಿಖೆಗೆ ಬಯಸುತ್ತಾರೆಯೋ ಆ ಸಮಿತಿಗೆ ರಾಜ್ಯ ಸರ್ಕಾರವು ತನ್ನ ಸಮ್ಮತಿಯನ್ನು ನೀಡಿತು. ರಾಜ್ಯ ಸರ್ಕಾರ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ಸದಾ ಜನಸೇವೆಯಲ್ಲಿ ತೊಡಗಿಕೊಂಡಿದೆ. ಸಬ್ ಕಾ ಸಾಥ್ ಸಬ್ಕಾ ವಿಕಾಸ್ ಮಂತ್ರದೊಂದಿಗೆ ಬಿಜೆಪಿ ಕೆಲಸ ಮಾಡುತ್ತಿದೆ. ಎಲ್ಲ ರಾಜ್ಯಗಳಲ್ಲಿಯೂ ಬಿಜೆಪಿಯನ್ನು ನೋಡುತ್ತಿದ್ದೇನೆ. ಪ್ರಚಂಡ ಬಹುಮತದ 5 ರಾಜ್ಯಗಳಲ್ಲಿ ಗೆಲ್ಲುತ್ತೇವೆ. 5 ರಾಜ್ಯಗಳಲ್ಲಿ ಸೇವೆಸಲ್ಲಿಸಲು ಜನ ಅವಕಾಶ ನೀಡುತ್ತಾರೆ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯ ಮುನ್ನಾದಿನದಂದು, ಎಲ್ಲಾ 5 ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸುವ ವಿಶ್ವಾಸವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ನಲ್ಲಿ ಪ್ರಧಾನಿ ಭದ್ರತಾ ವೈಫಲ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದರೆ ತನಿಖೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರೈತರ ಅನುಕೂಲಕ್ಕಾಗಿ ಕೃಷಿ ಕಾಯ್ದೆ ಜಾರಿಗೆ ತಂದಿದ್ದೆವು. ಆದರೆ, ರಾಷ್ಟ್ರದ ಹಿತಾಸಕ್ತಿಯಿಂದ ಕೃಷಿ ಕಾಯ್ದೆಯನ್ನು ಹಿಂಪಡೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.