ಬೆಳಗಾವಿ: ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲಖನ್ ಜಾರಕಿಹೊಳಿ ಜಯಭೇರಿ ಬಾರಿಸಿದ್ದಾರೆ. ಇದರೊಂದಿಗೆ ಜಾರಕಿಹೊಳಿ ಕುಟುಂಬದ ಶಾಸಕರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ರಮೇಶ್ ಜಾರಕಿಹೊಳಿ ಗೋಕಾಕ್ ಕ್ಷೇತ್ರದ ಶಾಸಕರಾಗಿದ್ದು, ಬಾಲಚಂದ್ರ ಜಾರಕಿಹೊಳಿ ಅರಭಾವಿ ಶಾಸಕರಾಗಿದ್ದಾರೆ. ಇವರಿಬ್ಬರು ಬಿಜೆಪಿ ಶಾಸಕರಾಗಿದ್ದು, ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಯಮಕನಮರಡಿ ಶಾಸಕರಾಗಿದ್ದಾರೆ. ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಆಯ್ಕೆಯಾಗುವ ಮೂಲಕ ಜಾರಕಿಹೊಳಿ ಕುಟುಂಬದ ನಾಲ್ವರು ಸಹೋದರರು ಶಾಸಕರಾದಂತಾಗಿದೆ.
ಲಖನ್ ಅವರಿಗೆ ಬಿಜೆಪಿ ಟಿಕೆಟ್ ಕೇಳಲಾಗಿತ್ತು. ಆದರೆ ಪಕ್ಷ ಅವಕಾಶ ನೀಡಿರಲಿಲ್ಲವಾದ್ದರಿಂದ ಪಕ್ಷೇತರರಾಗಿ ಕಣಕ್ಕಿಳಿದು ಜಯಗಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಬೆಳಗಾವಿ ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಚನ್ನರಾಜ ಹಟ್ಟಿಹೊಳಿ, ಲಖನ್ ಜಾರಕಿಹೊಳಿ ಆಯ್ಕೆಯಾಗಿದ್ದಾರೆ.