ಕೋಲಾರ: ಪಾರ್ಟಿ ಮುಗಿಸಿ ತೆಪ್ಪದಲ್ಲಿ ರೌಂಡ್ಸ್ ಹಾಕುವಾಗ ಕೆರೆಯಲ್ಲಿ ತೆಪ್ಪ ಮಗುಚಿ ಬಿದ್ದು ಮೂವರು ಯುವಕರು ನೀರುಪಾಲಾದ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ನೇರಳಕೆರೆ ಸಮೀಪ ನಡೆದಿದೆ.
ನವೀನ್(32), ರಾಜೇಂದ್ರ(32), ಮೋಹನ್(28) ನೀರುಪಾಲಾದವರು ಎಂದು ಹೇಳಲಾಗಿದೆ. ಇವರೊಂದಿಗೆ ಬಂದಿದ್ದ ಶಿವರಾಜ್ ಊಟ ತರಲು ಹೋಗಿದ್ದ ಬದುಕುಳಿದಿದ್ದಾರೆ.
ಕೆರೆ ಬಳಿ ಪಾರ್ಟಿ ಮಾಡಿದ ಸ್ನೇಹಿತರು ತೆಪ್ಪದಲ್ಲಿ ರೌಂಡ್ಸ್ ಹಾಕುವಾಗ ತೆಪ್ಪ ಮಗುಚಿ ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ರಕ್ಷಣೆಗೆ ಮುಂದಾದರೂ ಕೆರೆಯ ಮಧ್ಯದಲ್ಲಿ ಯುವಕರು ಸಿಲುಕಿಕೊಂಡಿದ್ದ ಕಾರಣ ತಕ್ಷಣಕ್ಕೆ ರಕ್ಷಣೆ ಕಾರ್ಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಮಾಹಿತಿ ತಿಳಿದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರ ನೆರವಿನೊಂದಿಗೆ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.