
ಭುವನೇಶ್ವರದ ಖಾಸಗಿ ಕಾಲೇಜಿನ ಮಹಿಳಾ ಉಪನ್ಯಾಸಕಿಯೊಬ್ಬರು ತಮ್ಮ ಸಹೋದ್ಯೋಗಿಯನ್ನೇ ಹನಿಟ್ರ್ಯಾಪ್ ಮಾಡಿ, ನಗ್ನ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಳೆದ 12 ವರ್ಷಗಳಿಂದ ಈ ಕಿರುಕುಳ ನಡೆಯುತ್ತಿದ್ದು, ಇದರಿಂದ ಬೇಸತ್ತ ಆತ ಆತ್ಮಹತ್ಯೆಗೆ ಯತ್ನಿಸಿದ್ದು, ಪತ್ನಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸಂತ್ರಸ್ಥನ ಪತ್ನಿ ನೀಡಿರುವ ದೂರಿನ ಪ್ರಕಾರ, 2012ರಲ್ಲಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುವಾಗ ಇಬ್ಬರ ನಡುವೆ ಪರಿಚಯವಾಗಿತ್ತು. ನಂತರ ಮಹಿಳಾ ಉಪನ್ಯಾಸಕಿ ತಮ್ಮ ಪತಿಗೆ ನಗ್ನ ವಿಡಿಯೋ ಕರೆಗಳನ್ನು ಮಾಡಿ, ಅದನ್ನು ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದ ಪತಿ, ಮೊದಲ ಪತ್ನಿ ಮತ್ತು ಮಗಳನ್ನು ಕಳೆದುಕೊಂಡಿದ್ದಾರೆ.
ಈ ಘಟನೆ ತಿಳಿದ ಎರಡನೇ ಪತ್ನಿ, ಮಹಿಳಾ ಉಪನ್ಯಾಸಕಿಗೆ ಬುದ್ಧಿ ಹೇಳಿದ್ದಾರೆ. ಆಗ ಆಕೆ ವಿಧವೆ ಎಂದು, ಮಗಳ ಭವಿಷ್ಯದ ದೃಷ್ಟಿಯಿಂದ ದೂರು ನೀಡದಂತೆ ಬೇಡಿಕೊಂಡಿದ್ದಳು. ಇದಾದ ನಂತರ ಕೆಲಕಾಲ ಸುಮ್ಮನಿದ್ದ ಆಕೆ, ಮತ್ತೆ ಫೋನ್‌ಪೇ ಮೂಲಕ ಸಂಪರ್ಕಿಸಿ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಳು. ಇದರಿಂದ ನೊಂದ ಪತಿ ಆತ್ಮಹತ್ಯೆಗೆ ಯತ್ನಿಸಿದ್ದು, ಪತ್ನಿ ಇದೀಗ ಲಕ್ಷ್ಮೀಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“2012ರಿಂದ ನನ್ನ ಪತಿಗೆ ಕಿರುಕುಳ ನೀಡಲಾಗುತ್ತಿದೆ. ಇದರಿಂದ ಅವರ ಮೊದಲ ಮದುವೆ ಮುರಿದುಬಿದ್ದಿದೆ. ನಾನು ಮದುವೆಯಾಗಿ ಒಂದು ವರ್ಷವಾಗಿದೆ. ಆಕೆಯ ನಗ್ನ ವಿಡಿಯೋಗಳು ಮತ್ತು ಅಶ್ಲೀಲ ಸಂದೇಶಗಳನ್ನು ನೋಡಿದ ನಂತರ ನನಗೆ ಈ ವಿಷಯ ತಿಳಿಯಿತು. ಆಕೆ ತರಕಾರಿ ಖರೀದಿಯಿಂದ ಹಿಡಿದು ಮಗಳ ಶಾಲಾ ಪ್ರವೇಶದವರೆಗೂ ಹಣ ಪಡೆದಿದ್ದಾಳೆ. ನನ್ನ ಪತಿ ಆಕೆಯ ಫೋನ್ ಬ್ಲಾಕ್ ಮಾಡಿದ್ದರು. ಆದರೂ ಆಕೆ ಬ್ಲ್ಯಾಕ್‌ಮೇಲ್ ಮುಂದುವರೆಸಿದ್ದಾಳೆ” ಎಂದು ಪತ್ನಿ ಆರೋಪಿಸಿದ್ದಾರೆ.
“ಪೊಲೀಸರಿಂದ ಕರೆ ಬಂದ ನಂತರ, ಆಕೆ ಕ್ಷಮೆ ಕೇಳಿ, ಮಗಳ ಖರ್ಚಿಗೆ ಹಣ ಬೇಕು, ನಾನು ವಿಧವೆ ಎಂದು ಹೇಳಿ ಮತ್ತೆ ಬ್ಲ್ಯಾಕ್‌ಮೇಲ್ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಳು. ನಾವು ಆಕೆಯನ್ನು ಕ್ಷಮಿಸಿದ್ದೆವು. ಸುಮಾರು ಒಂದು ವರ್ಷದವರೆಗೆ ಆಕೆ ಸಂಪರ್ಕಿಸಲಿಲ್ಲ. ಆದರೆ, ಇತ್ತೀಚೆಗೆ ಫೋನ್‌ಪೇ ಮೂಲಕ ಸಂದೇಶ ಕಳುಹಿಸಿ, ಮಾತನಾಡಲು, ಭೇಟಿಯಾಗಲು ಮತ್ತು ವಾಟ್ಸಾಪ್‌ನಲ್ಲಿ ಅನ್‌ಬ್ಲಾಕ್ ಮಾಡಲು ಬೆದರಿಕೆ ಹಾಕಿದ್ದಾಳೆ. ಮತ್ತೆ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದಾಳೆ. ಇದರಿಂದ ಮಾನಸಿಕವಾಗಿ ನೊಂದ ನನ್ನ ಪತಿ ಮನೆಯಿಂದ ಓಡಿಹೋಗಲು ಬಯಸಿದ್ದರು ಮತ್ತು ಹಲವಾರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅದಕ್ಕಾಗಿಯೇ ಈಗ ನಾನು ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದೇನೆ” ಎಂದು ಪತ್ನಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ಮಹಿಳಾ ಉಪನ್ಯಾಸಕಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.