ಬೆಂಗಳೂರು : ಮಹಿಳೆಯರ ಸುರಕ್ಷತೆಗೆ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಬೆಂಗಳೂರಿನ 60 ಕಡೆ ‘ನೆರವು ಸಹಾಯ ಕೇಂದ್ರ’ ಆರಂಭಿಸಿದೆ.
ಮಹಿಳೆಯರ ಮೇಲೆ ವಿವಿಧ ರೀತಿಯ ದೌರ್ಜನ್ಯಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಜನದಟ್ಟಣೆ ಹೆಚ್ಚಿರುವ ಬೆಂಗಳೂರು ನಗರದ 60 ಪ್ರದೇಶಗಳಲ್ಲಿ ನೆರವು ಸಹಾಯ ಕೇಂದ್ರ ತೆರೆದಿರುವ ಪೊಲೀಸ್ ಇಲಾಖೆ ಮಹಿಳೆಯರು, ಮಕ್ಕಳ ಸುರಕ್ಷತೆ ಖಾತರಿಗೊಳಿಸಲು ಕಾಳಜಿ ವಹಿಸಿದೆ.
ನಗರ ವ್ಯಾಪ್ತಿಯ ಜನಸಂದಣಿ ಪ್ರದೇಶಗಳಲ್ಲಿ, ಹೆಚ್ಚಾಗಿ ಮಹಿಳೆಯರು ಸಂಚರಿಸುವ, ನಿರ್ಜನ ಪ್ರದೇಶಗಳಲ್ಲಿ, ಮಹಿಳಾ ವಸತಿ ನಿಲಯಗಳು, ಸಾಫ್ಟ್ವೇರ್ ಕಂಪನಿಗಳಿರುವ ಹಾಗೂ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಟ್ಟ ಪ್ರದೇಶಗಳಲ್ಲಿ ನೆರವು ಕೇಂದ್ರಗಳನ್ನು ತೆರೆಯಲಾಗಿದೆ. ಸದ್ಯ ಅಲ್ಲಿ ಪ್ರತ್ಯೇಕ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರೈಲಿಗಾಗಿ ಕಾಯುವವರು, ಬಸ್ ತಪ್ಪಿಸಿಕೊಳ್ಳುವ, ಮಳೆ ಸಂದರ್ಭ ಹಾಗೂ ತಡರಾತ್ರಿ ನಗರಕ್ಕೆ ಬಂದಿಳಿಯುವ ಮಹಿಳೆಯರು ನೆರವು ಕೇಂದ್ರಗಳಲ್ಲಿ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಕೇಂದ್ರದಲ್ಲಿ ನಾಲ್ಕು ಬೆಡ್ಗಳು, ಎಇಡಿ ದೀಪಗಳು, ಸೀಲಿಂಗ್ ಫ್ಯಾನ್, ಶೌಚಾಲಯ, 300 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಹಾಗೂ ತುರ್ತು ಚಿಕಿತ್ಸಾ ಪೆಟ್ಟಿಗೆಯನ್ನು ಇಡಲಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.