ತುಟಿಗಳ ಮೇಲ್ಭಾಗದಲ್ಲಿರುವ ಕೂದಲು ಅನೇಕ ಮಹಿಳೆಯರಿಗೆ ಕಿರಿಕಿರಿಯುಂಟು ಮಾಡುತ್ತದೆ. ಇದನ್ನು ತೆಗೆಯಲು ಮಹಿಳೆಯರು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಕೆಲ ಮಹಿಳೆಯರಿಗೆ ವಾರದೊಳಗೆ ಮತ್ತೆ ಕೂದಲು ಬೆಳೆಯುವುದುಂಟು.
ಇದಕ್ಕೆ ಹಾರ್ಮೋನ್ ನಲ್ಲಾಗುವ ಏರುಪೇರು ಕಾರಣ. ಪದೇ ಪದೇ ಬ್ಯೂಟಿ ಪಾರ್ಲರ್ ಗೆ ಹೋಗುವುದು ಸುಲಭವಲ್ಲ. ಅಂತವರು ಮನೆ ಮದ್ದು ಬಳಸಿ ಸೌಂದರ್ಯ ಕಾಪಾಡಿಕೊಳ್ಳಬಹುದು.
ತುಟಿಗಳ ಮೇಲ್ಭಾಗದಲ್ಲಿ ಕಾಣುವ ಕೂದಲು ಸಮಸ್ಯೆಗೆ ಅರಿಶಿನ ಹೇಳಿ ಮಾಡಿಸಿದ ಔಷಧಿ. ಒಂದು ಚಮಚ ಅರಿಶಿನಕ್ಕೆ ಸ್ವಲ್ಪ ನೀರನ್ನು ಸೇರಿಸಿ ದಪ್ಪನೆಯ ಪೇಸ್ಟ್ ಮಾಡಿಕೊಳ್ಳಿ.
ಇದನ್ನು ಕೂದಲಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಕೈ ಬೆರಳುಗಳಿಂದ ಮಸಾಜ್ ಮಾಡುತ್ತ ಅರಿಶಿನದ ಪೇಸ್ಟ್ ತೆಗೆಯಿರಿ. ಅರಿಶಿನದ ಪೇಸ್ಟ್ ಜೊತೆ ಕೂದಲು ಕಿತ್ತು ಬರುತ್ತದೆ. ತಿಂಗಳಲ್ಲಿ 4-5 ದಿನ ಹೀಗೆ ಮಾಡಿದ್ರೆ ಕೂದಲು ಬೆಳೆಯುವುದು ನಿಲ್ಲುತ್ತದೆ.
ನಿಂಬೆ ಹಣ್ಣಿನ ರಸ ಹಾಗೂ ಸಕ್ಕರೆ ಕೂಡ ಅಪ್ಪರ್ ಲಿಪ್ಸ್ ಕೂದಲನ್ನು ಹೋಗಲಾಡಿಸುತ್ತದೆ. ಲಿಂಬೆ ರಸಕ್ಕೆ ನೀರು ಹಾಗೂ ಸಕ್ಕರೆಯನ್ನು ಮಿಕ್ಸ್ ಮಾಡಿ. ಸಕ್ಕರೆ ಕರಗಿದ ನಂತ್ರ ತುಟಿಯ ಮೇಲ್ಭಾಗಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ಸ್ವಚ್ಛಗೊಳಿಸಿಕೊಳ್ಳಿ.
ಮೊಟ್ಟೆಯ ಬಿಳಿ ಭಾಗ ಕೂಡ ಅಪ್ಪರ್ ಲಿಪ್ಸ್ ಕೂದಲು ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮೊಟ್ಟೆಯ ಬಿಳಿ ಭಾಗಕ್ಕೆ ಕಡಲೆ ಹಿಟ್ಟು ಹಾಗೂ ಸಕ್ಕರೆಯನ್ನು ಹಾಕಿ ಮಿಕ್ಸ್ ಮಾಡಿ. ಇದನ್ನು ತುಟಿಯ ಮೇಲ್ಭಾಗಕ್ಕೆ ಹಚ್ಚಿಕೊಂಡು 30 ನಿಮಿಷ ಬಿಟ್ಟು ಸ್ವಚ್ಛಗೊಳಿಸಿಕೊಳ್ಳಿ.
ಸ್ವಲ್ಪ ಮೊಸರಿಗೆ ಒಂದು ಚಮಚ ಕಡಲೆ ಹಿಟ್ಟನ್ನು ಹಾಕಿ ಮಿಶ್ರಣ ತಯಾರಿಸಿಕೊಳ್ಳಿ. ಇದನ್ನು ಅಪ್ಪರ್ ಲಿಪ್ಸ್ ಗೆ ಹಚ್ಚಿಕೊಂಡು ಒಣಗಿದ ನಂತ್ರ ನಿಧಾನವಾಗಿ ತೆಗೆಯಿರಿ. ಕ್ರಮೇಣ ಕೂದಲು ಹುಟ್ಟುವ ಪ್ರಮಾಣ ಕಡಿಮೆಯಾಗುತ್ತ ಬರುತ್ತದೆ.