ಮಹಿಳೆಯರು ಅನೇಕ ರೀತಿಯ ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳಲ್ಲಿ ಕೆಲವನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ಸಮಸ್ಯೆಗಳಿಗೆ ಆರೋಗ್ಯ ತಜ್ಞರ ಅಗತ್ಯವಿರುತ್ತದೆ. ಕೆಲ ಸಮಸ್ಯೆಗಳನ್ನು ಸಾಮಾನ್ಯವೆಂದು ಪರಿಗಣಿಸದೆ ತಕ್ಷಣ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ.
ಕೆಲವು ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ತೀವ್ರ ನೋವು ಅನುಭವಿಸುತ್ತಾರೆ. ಇದನ್ನು ಡಿಸ್ಮೆನೊರ್ಹೋಯಾ ಎಂದೂ ಕರೆಯುತ್ತಾರೆ. ಈ ನೋವಿನಿಂದಾಗಿ ಮಹಿಳೆಯರಿಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅಂಥವರು ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ವೈದ್ಯಕೀಯ ಪರೀಕ್ಷೆ ಮತ್ತು ಪೆಲ್ವಿಕ್ ಸೋನೋಗ್ರಫಿ ಮಾಡಿಸಿಕೊಳ್ಳಬೇಕಾಗುತ್ತದೆ.
ಲೈಂಗಿಕತೆಯ ನಂತರ ರಕ್ತಸ್ರಾವ ಅಥವಾ ಮುಟ್ಟಿನ ನಡುವೆ ರಕ್ತಸ್ರಾವ ಅನೇಕರನ್ನು ಕಾಡುತ್ತದೆ. ಇದು ಲೈಂಗಿಕವಾಗಿ ಹರಡುವ ಸೋಂಕಿನ ಎಚ್ಚರಿಕೆಯಾಗಿರುತ್ತದೆ. ಉರಿಯೂತದ ಕಾಯಿಲೆ ಅಥವಾ ಗರ್ಭಕಂಠದ ಕ್ಯಾನ್ಸರ್ ಗೂ ಇದು ಕಾರಣವಾಗುತ್ತದೆ. ಇದನ್ನು ಪತ್ತೆಹಚ್ಚಲು ಪ್ಯಾಪ್ ಸ್ಮೀಯರ್ ಮತ್ತು ಕ್ಲಮೈಡಿಯ ಪರೀಕ್ಷೆ ಮಾಡಿಸಬೇಕು. ಎಸ್‌ಟಿಐಗಳು ಮತ್ತು ಆರಂಭಿಕ ಗರ್ಭಕಂಠದ ಕ್ಯಾನ್ಸರ್ ಮೊದಲೇ ಪತ್ತೆಹಚ್ಚಿದರೆ, ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದು.
ಯೋನಿ ನೋವು ಹಲವಾರು ಕಾರಣಗಳಿಂದ ಉಂಟಾಗುತ್ತದೆ. ಯೋನಿಯ ಸೋಂಕು ಅಥವಾ ಯೋನಿಯ ಬಳಿ ಚರ್ಮದ ಬಾವು ಇದಕ್ಕೆ ಕಾರಣವಾಗಿರಬಹುದು. ಕೆಲವೊಮ್ಮೆ ಯೋನಿ ಡಿಸ್ಚಾರ್ಜ್ ಅಥವಾ ತುರಿಕೆ ಇರಬಹುದು. ವೈದ್ಯರನ್ನು ಸಂಪರ್ಕಿಸಿ, ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು.
ಮೂತ್ರ ಸೋರಿಕೆಯ ಸಮಸ್ಯೆಯಿಂದ ಮಹಿಳೆಯರು ಸಾಕಷ್ಟು ಮುಜುಗರ ಅನುಭವಿಸುತ್ತಾರೆ. ಇದ್ರ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಸಾಮಾನ್ಯವಾಗಿ ಕೆಮ್ಮುವಾಗ ಅಥವಾ ಸೀನುವಾಗ ಅಥವಾ ವ್ಯಾಯಾಮ ಮಾಡುವಾಗ ಮೂತ್ರ ವಿಸರ್ಜನೆಯಾಗುತ್ತದೆ. ಇದನ್ನು ನಿರ್ಲಕ್ಷ್ಯಿಸದೆ ಚಿಕಿತ್ಸೆ ಪಡೆಯಬೇಕು.