ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಮನೆಯ ಯಜಮಾನಿಯರಿಗೆ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, 2 ಕಂತಿನ ಹಣ ಶೀಘ್ರವೇ ಬಿಡುಗಡೆಯಾಗಲಿದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕಾಯುತ್ತಿರುವ ಮಹಿಳೆಯರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದ್ದು, ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಎಂದು ತಿದ್ದುಪಡಿ ಮಾಡಲು ಇಂದಿನಿಂದ ಮತ್ತೆ ಅವಕಾಶ ನೀಡಿದೆ.
ಹೌದು, ಆಹಾರ ಇಲಾಖೆಯು ಕೆಲ ಜಿಲ್ಲೆಗಳಲ್ಲಿ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಮತ್ತೊಂದು ಅವಕಾಶ ನೀಡಿದ್ದು, ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಎಂದು ತಿದ್ದುಪಡಿ ಮಾಡಬಹುದಾಗಿದೆ. ಇಂದಿನಿಂದ ಅ.21 ರವರೆಗೆ ಬಳ್ಳಾರಿ, ಬಿದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ , ಕಲಬುರಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ಯಜಮಾನಿಯ ಸ್ಥಾನದಲ್ಲಿರುವ ಮಹಿಳೆ ನಿಧನರಾಗಿದ್ದರೆ, ಪಡಿತರ ಚೀಟಿಯಲ್ಲಿ ಪುರುಷ ಕುಟುಂಬದ ಮುಖ್ಯಸ್ಥನಾಗಿದ್ದರೆ, ಯಜಮಾನಿಯ ಸ್ಥಾನವನ್ನು ಅತ್ತೆಯಿಂದ ಸೊಸೆಗೆ ಅಥವಾ ಸೊಸೆಯಿಂದ ಅತ್ತೆಗೆ ವರ್ಗಾಯಿಸಬೇಕಾಗಿದ್ದರೆ, ಯೋಜನೆಗೆ ಇದುವರೆಗೂ ನೋಂದಾಯಿಸದೇ ಇರುವವರು ಯಜಮಾನಿಯ ಬದಲಾವಣೆ ಮಾಡಿಕೊಳ್ಳಬಹುದು.