
ಶಿವಮೊಗ್ಗ: ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರ ಹೆಸರಲ್ಲಿ ಎನ್ಇಎಸ್ ಕಾರ್ಯದರ್ಶಿ ಮತ್ತು ಇಬ್ಬರು ವೈದ್ಯರಿಗೆ ಕಲಬೆರಕೆ ಲಡ್ಡು ಕಳಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುಬ್ಬಯ್ಯ ಮೆಡಿಕಲ್ ಕಾಲೇಜು ಎದುರುಗಡೆಯ ನಿವಾಸಿ ಸೌಹಾರ್ದ್ ಪಟೇಲ್(26) ಬಂಧಿತ ಆರೋಪಿ. ಎನ್ಎಎಸ್ ಸಿಬಿಆರ್ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿರುವ ಸೌಹಾರ್ದ್ ಪಟೇಲ್ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾನೂನು ಪದವಿ ಓದುವಾಗ ಅವರಿಗೆ ಎನ್ಎಸ್ ಕಾರ್ಯದರ್ಶಿ ನಾಗರಾಜ್ ಅವರು ಬೈದಿದ್ದರು. ಮಾನಸಿಕ ಸಮಸ್ಯೆ ಇದೆ ಎಂಬ ಕಾರಣಕ್ಕೆ ತಜ್ಞ ವೈದ್ಯರಾದ ಡಾ.ಎಸ್.ಟಿ. ಅರವಿಂದ್ ಮತ್ತು ಡಾ.ಕೆ.ಎಸ್. ಪವಿತ್ರಾ ಅವರ ಬಳಿ ಆರೋಪಿ ಚಿಕಿತ್ಸೆ ಪಡೆದುಕೊಂಡಿದ್ದ ಎಂದು ಹೇಳಲಾಗಿದೆ. ಮಾನಸಿಕ ತಜ್ಞರು ನೀಡಿದ್ದ ಮಾತ್ರೆಗಳನ್ನು ಪುಡಿ ಮಾಡಿ ಲಡ್ಡಿನಲ್ಲಿ ಮಿಶ್ರಣ ಮಾಡಿ ಧನಂಜಯ ಸರ್ಜಿ ಹೆಸರಲ್ಲಿ ಹೊಸ ವರ್ಷದ ಶುಭಾಶಯ ಪತ್ರದೊಂದಿಗೆ ಕೊರಿಯರ್ ಮೂಲಕ ಕಳುಹಿಸಿದ್ದ ಎನ್ನಲಾಗಿದ್ದು, ಪೊಲೀಸರು ತನಿಖೆ ನಡೆಸಿ ಆರೋಪಿ ಬಂಧಿಸಿದ್ದಾರೆ.