ಮೂಲ ಸೌಕರ್ಯಗಳ ಕೊರತೆ ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳಿಸದ ಹಿನ್ನೆಲೆಯಲ್ಲಿ ಸರ್ಕಾರಿ ಕಾಲೇಜುಗಳು ಸೇರಿದಂತೆ ರಾಜ್ಯದ 27 ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ದಂಡ ವಿಧಿಸಿದೆ.
ಪ್ರಯೋಗಾಲಯಗಳ ಕೊರತೆ, ಅಗತ್ಯವಿರುವ ಸಂಖ್ಯೆಯ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳದೆ ಇರುವುದು, ರೋಗಿಗಳ ದತ್ತಾಂಶ ಸಮರ್ಪಕವಾಗಿ ನಿರ್ವಹಿಸದಿರುವುದು, ಕಳಪೆ ಉಪಕರಣ ಬಳಕೆ ಸೇರಿದಂತೆ ಹಲವು ಕಾರಣಗಳಿಗಾಗಿ ಈ ದಂಡ ವಿಧಿಸಲಾಗಿದೆ.
ದಂಡ ವಿಧಿಸಲಾದ 27 ವೈದ್ಯಕೀಯ ಕಾಲೇಜುಗಳ ಪೈಕಿ 11 ಖಾಸಗಿ ಕಾಲೇಜುಗಳು ಸೇರಿವೆ. ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಮಂಡ್ಯ, ಯಾದಗಿರಿ, ಕಾರವಾರ, ಮೈಸೂರು, ಕಲಬುರಗಿ, ಹುಬ್ಬಳ್ಳಿ, ಕೊಡಗು, ಚಾಮರಾಜನಗರ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಹಾಗೂ ಎರಡು ಇಎಸ್ಐ ಕಾಲೇಜುಗಳಿಗೆ ದಂಡ ವಿಧಿಸಲಾಗಿದೆ.