ನವದೆಹಲಿ: 15 ನಿಮಿಷ ಹೆಚ್ಚು ಕೆಲಸ ಮಾಡಿದರೂ ಓಟಿ ಎಂದು ಪರಿಗಣಿಸುವುದು, ಎಲ್ಲಾ ಕಾರ್ಮಿಕರಿಗೂ ಪಿಎಫ್, ಇಎಸ್ಐ ಕಲ್ಪಿಸುವ ಕುರಿತಂತೆ ಸರ್ಕಾರದಿಂದ ಹೊಸ ನಿಯಮ ಜಾರಿಗೆ ಮುಂದಾಗಿದೆ.
ಕಾರ್ಮಿಕ ಇಲಾಖೆ ಹೊಸ ಕಾರ್ಮಿಕ ಕಾನೂನು ಜಾರಿಗೊಳಿಸಲು ಚಿಂತನೆ ನಡೆಸಿದ್ದು ಶೀಘ್ರದಲ್ಲೇ ಕರಡು ಸಿದ್ಧಪಡಿಸಲಾಗುವುದು. ನೂತನ ಕಾರ್ಮಿಕ ಕಾನೂನುಗಳ ಕರಡು ಅನ್ವಯ ಹೆಚ್ಚುವರಿ ಅವಧಿ ಕೆಲಸ ಮಾಡಿದರೆ ಕಂಪನಿ ಕೆಲಸಗಾರನಿಗೆ ಸೂಕ್ತವಾದ ಸಂಭಾವನೆ ಕೊಡಬೇಕಿದೆ.
ನಿಗದಿತ ಸಮಯಕ್ಕಿಂತ 15 ನಿಮಿಷ ಹೆಚ್ಚು ಕೆಲಸ ಮಾಡಿದರೂ ಕೂಡ ಕಾರ್ಮಿಕರಿಗೆ ಸೂಕ್ತ ಸಂಭಾವನೆ ಕೊಡಬೇಕಿದೆ. ಈಗ ಇರುವ ಕಾನೂನಿನನ್ವಯ ಕಾರ್ಮಿಕರು ಅರ್ಧ ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಕೆಲಸ ಮಾಡಿದರೆ ಮಾತ್ರ ಓಟಿ ಎಂದು ಪರಿಗಣಿಸಲಾಗುತ್ತದೆ. ಈಗ 15 ನಿಮಿಷ ಹೆಚ್ಚು ಕೆಲಸ ಮಾಡಿದರೂ ಓಟಿ ಎಂದು ಪರಿಗಣಿಸಲಾಗುವುದು.
ಅಲ್ಲದೇ, ಎಲ್ಲಾ ಕೆಲಸಗಾರರಿಗೆ ಪಿಎಫ್, ಇಎಸ್ಐ ನೀಡಬೇಕಿದೆ. ಹೊರಗುತ್ತಿಗೆ ಅಥವಾ ಥರ್ಡ್ ಪಾರ್ಟಿಯಿಂದ ಬಂದ ಕೆಲಸಗಾರರು ಎಂದು ಕಾರಣ ನೀಡದೇ ಎಲ್ಲ ಕಾರ್ಮಿಕರಿಗೂ ಪೂರ್ಣ ಸಂಬಳ, ಪಿಎಫ್, ಇಎಸ್ಐ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಲಾಗಿದೆ.