ಬೆಂಗಳೂರು: ಖಾಸಗಿ ಸಾರಿಗೆ ಸಂಸ್ಥೆಗಳ ನೌಕರರು, ಸಿನಿಮಾ ಕ್ಷೇತ್ರದಲ್ಲಿ ದುಡಿಯುವವರು, ಆಹಾರ, ವಸ್ತುಗಳನ್ನು ಸರಬರಾಜು ಮಾಡುವ ಕಾರ್ಮಿಕರು ಸೇರಿ ಸುಮಾರು 45 ಲಕ್ಷ ಜನರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಕಾರ್ಮಿಕರ ಕುಟುಂಬಕ್ಕೆ ಆರೋಗ್ಯ, ಮಕ್ಕಳಿಗೆ ಶಿಕ್ಷಣ ಸೇರಿ ವಿವಿಧ ಭದ್ರತೆ ಒದಗಿಸಲು ತೀರ್ಮಾನಿಸಲಾಗಿದೆ. ಚಾಲಕರು, ನಿರ್ವಾಹಕರು, ಕ್ಲೀನರ್, ಮೆಕಾನಿಕ್ ಗಳು ಸೇರಿ ಸುಮಾರು 40 ಲಕ್ಷ ಮಂದಿ ಕಾರ್ಮಿಕರಾಗಿ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದು, ಆಹಾರ, ವಸ್ತುಗಳನ್ನು ಸರಬರಾಜು ಮಾಡುವವರು, ಸಿನಿಮಾ ಕಾರ್ಮಿಕರು ಕೂಡ ಈ ವಲಯಕ್ಕೆ ಸೇರಿದವರಾಗಿದ್ದಾರೆ. ಅಂತವರಿಗೆ ಯಾವುದೇ ಭದ್ರತೆ ಇಲ್ಲವಾಗಿದೆ ಎಂದು ಹೇಳಿದ್ದಾರೆ.
ಮೋಟಾರು ವಾಹನ ಖರೀದಿಸುವವರಿಗೆ ಶೇ. 5 ರಷ್ಟು ವಿಧಿಸಲಾಗುತ್ತಿದೆ. ಇಲಾಖೆ ಮೂಲಕ ಖಾಸಗಿ ವಲಯದಲ್ಲಿ ಕೆಲಸ ಮಾಡುವ 40 ಲಕ್ಷ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲಾಗುವುದು. ಆನ್ಲೈನ್ ಮೂಲಕ ಸೇವೆ ಸಲ್ಲಿಸುತ್ತಿರುವ ಸುಮಾರು 40 ಲಕ್ಷ ಜನ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೂ ಸಾಮಾಜಿಕ ಭದ್ರತೆ ಇಲ್ಲ. ಹೀಗಾಗಿ ಸರ್ಕಾರ ಅನುಕೂಲ ಕಲ್ಪಿಸಲಿದೆ ಎಂದರು.
ಜೊಮ್ಯಾಟೋ, ಸ್ವಿಗ್ಗಿ ಮೊದಲಾದ ಆಹಾರ ಪದಾರ್ಥ ಸರಬರಾಜು ಮಾಡುವವರು, ಅಮೆಜಾನ್, ಫ್ಲಿಪ್ಕಾರ್ಟ್ ನಂತಹ ಕಂಪನಿಗಳಲ್ಲಿ ವಸ್ತು ಸರಬರಾಜು ಮಾಡುವವರಿಗೆ ಸೌಲಭ್ಯ ಕಲ್ಪಿಸಲಾಗುವುದು. ಅವರು ಕೆಲಸ ಮಾಡುವ ಕಂಪನಿಗಳಿಂದ ನಿರ್ದಿಷ್ಟ ಪ್ರಮಾಣದ ಸೆಸ್ ಪಡೆದು ಭವಿಷ್ಯ ನಿಧಿ ರೂಪಿಸಲಿದ್ದು, ಸೆಸ್ ಮೂಲಕ ಸಂಗ್ರಹಿಸಿದ ಹಣಕ್ಕೆ ಸರ್ಕಾರದ ಪಾಲು ಸೇರಿಸಿ ಭವಿಷ್ಯ ನಿಧಿ ಪ್ರಮಾಣ ಹೆಚ್ಚಳ ಮಾಡಲಾಗುವುದು. ಈ ಸಂಪನ್ಮೂಲ ಬಳಸಿಕೊಂಡು ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಕಾರ್ಮಿಕರಿಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿ 50 ಹಾಸಿಗೆ ಸಾಮರ್ಥ್ಯದ ಹೈಟೆಕ್ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು. ಈ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೇ, ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿರುವ 20,000 ಕಾರ್ಮಿಕರಿಗೆ ಭದ್ರತೆ ಇಲ್ಲವಾಗಿದ್ದು, ಅವರಿಗೂ ಅನುಕೂಲ ಕಲ್ಪಿಸಲಾಗುವುದು. ಸಿನಿಮಾ ಟಿಕೆಟ್ ನ ಶೇಕಡ 1ರಷ್ಟು ಹಣವನ್ನು ಸೆಸ್ ರೂಪದಲ್ಲಿ ಸಂಗ್ರಹಿಸಲು ಯೋಜಿಸಲಾಗಿದೆ. ಅದಕ್ಕೆ ಸರ್ಕಾರದಿಂದ 10 ಕೋಟಿ ರೂ. ಸೇರಿಸಿ ಲಭ್ಯವಾಗುವ ಸಂಪನ್ಮೂಲದಲ್ಲಿ ಸಿನಿಮಾ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.