ನವದೆಹಲಿ: ಕುವೈತ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಪ್ರಾಣ ಕಳೆದುಕೊಂಡ 45 ಭಾರತೀಯ ಸಂತ್ರಸ್ತರ ಪಾರ್ಥಿವ ಶರೀರವನ್ನು ಹೊತ್ತ ಭಾರತೀಯ ವಾಯುಪಡೆಯ ವಿಶೇಷ ವಿಮಾನವು ಕೊಚ್ಚಿಗೆ ಟೇಕಾಫ್ ಆಗಿದೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಶುಕ್ರವಾರ ಮುಂಜಾನೆ ತಿಳಿಸಿದೆ.
ಬುಧವಾರ ಕುವೈತ್ ನಲ್ಲಿ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ 45 ಭಾರತೀಯರಲ್ಲಿ ಕೇರಳದ 23 ನಿವಾಸಿಗಳು ಸೇರಿದ್ದಾರೆ. ತಮಿಳುನಾಡಿನ 7, ಆಂಧ್ರಪ್ರದೇಶದಿಂದ 3, ಬಿಹಾರ, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್, ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಿಂದ ತಲಾ 1 ಒಬ್ಬರು ಸೇರಿದ್ದಾರೆ.
. ಬೆಂಕಿಯ ಕಾರಣವನ್ನು ತನಿಖೆ ಮಾಡಲು ಮತ್ತು ಸಂತ್ರಸ್ತ ಕುಟುಂಬಗಳಿಗೆ ಬೆಂಬಲ ನೀಡಲು ಕುವೈತ್ ಅಧಿಕಾರಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ದುರಂತದಿಂದ ಹಾನಿಗೊಳಗಾದವರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಜೂನ್ 13 ರಂದು ಕುವೈತ್‌ನ ಆಸ್ಪತ್ರೆಗಳಿಗೆ ಭೇಟಿ ನೀಡಿದರು, ಅಲ್ಲಿ ಅವರು ಮಂಗಾಫ್‌ನಲ್ಲಿನ ದುರಂತ ಬೆಂಕಿ ಘಟನೆಯ ನಂತರ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಪ್ರಜೆಗಳ ಆರೋಗ್ಯ ವಿಚಾರಿಸಿದ್ದಾರೆ.