ನವದೆಹಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ಕುಂಭಮೇಳ ಸಾಂಕೇತಿಕವಾಗಿ ಆಚರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕುಂಭಮೇಳದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದು, ಸಾವಿರಾರು ಮಂದಿಗೆ ಕೊರೊನಾ ಸೋಂಕು ತಗುಲಿದೆ. ಪ್ರಮುಖ ಸಂತ ಮಹಾಮಂಡಲೇಶ್ವರ ಕಪಿಲ ದೇವದಾಸ್ ನಿಧನರಾಗಿದ್ದಾರೆ. ಇದರಿಂದಾಗಿ ನಿರ್ವಾಣಿ ಅಖಾಡ ಸಹಿತ ಹಲವು ಅಖಾಡಗಳು ಕುಂಭಮೇಳದಿಂದ ಹಿಂದೆ ಸರಿಯಲು ನಿರ್ಧರಿಸಿವೆ.
ಏಪ್ರಿಲ್ 30ರ ವರೆಗೂ ಕುಂಭಮೇಳ ನಡೆಯುವುದರಿಂದ ಸೋಂಕು ತೀವ್ರತರವಾಗಿ ಏರಿಕೆಯಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಕುಂಭಮೇಳ ಸಾಂಕೇತಿಕವಾಗಿ ನಡೆಸಲು ಮನವಿ ಮಾಡಿದ್ದಾರೆ. ಜುನಾ ಅಖಾರಾದ ಮುಖ್ಯಸ್ಥ ಸ್ವಾಮಿ ಅವಧೇಶ್ ಆನಂದಗಿರಿ ಅವರಿಗೆ ಕರೆ ಮಾಡಿ ಮಾತನಾಡಿದ ಮೋದಿ, ಕೊರೋನಾ ಸಾಂಕ್ರಾಮಿಕ ಬಿಕ್ಕಟ್ಟಿನ ಮಧ್ಯೆ ನಡೆಯುತ್ತಿರುವ ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಬೇಕೆಂದು ಕೋರಿದ್ದಾರೆ.
ವಿಶ್ವದ ಅತಿದೊಡ್ಡ ಧಾರ್ಮಿಕ ಕೂಟಗಳಲ್ಲಿ ಒಂದಾಗಿರುವ ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಲು ತಿಳಿಸಲಾಗಿದೆ. ಕುಂಭಮೇಳ 673 ಹೆಕ್ಟೇರ್ ಪ್ರದೇಶದಲ್ಲಿ ಹರಿದ್ವಾರ, ಟೆಹ್ರಿ, ಹೃಷಿಕೇಶ, ಡೆಹ್ರಾಡೂನ್ ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆಯಲಿದೆ.