ಕೇರಳದ ಎರ್ನಾಕುಲಂನಲ್ಲಿರುವ ಕುಂಬಳಂಗಿ ದೇಶದಲ್ಲೇ ಮೊದಲ ಸ್ಯಾನಿಟರಿ ನ್ಯಾಪ್ಕಿನ್ ಮುಕ್ತ ಗ್ರಾಮವಾಗಲಿದೆ. ಈ ತಿಂಗಳಲ್ಲೆ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಈ ಘೋಷಣೆ ಮಾಡಲಿದ್ದಾರೆ.
ಎರ್ನಾಕುಲಂ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಶಿಷ್ಟ ಪ್ರಚಾರದ ಭಾಗವಾಗಿ ಈ ಸಾಧನೆ ಮಾಡಲಾಗಿದೆ. ಈ ಇನಿಷಿಯೇಟಿವ್ ನ ಭಾಗವಾಗಿ, 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ಮೆನ್ಸ್ಟ್ರುಯಲ್ ಕಪ್ಗಳನ್ನು ವಿತರಿಸಲಾಗುತ್ತದೆ. ಕುಂಬಳಂಗಿಯ ಮಹಿಳೆಯರಿಗೆ ಒಟ್ಟು 5000 ಮುಟ್ಟಿನ ಕಪ್‌ಗಳನ್ನು ವಿತರಿಸಲಾಗುವುದು ಎಂದು ತಿಳಿದು ಬಂದಿದೆ.
ಎರ್ನಾಕುಲಂ ಲೋಕಸಭಾ ಕ್ಷೇತ್ರದಲ್ಲಿ, ‘ಅವಲ್ಕೈ’ (ಅವಳಿಗಾಗಿ) ಎನ್ನುವ ಯೋಜನೆ ನಡೆಸಲಾಗುತ್ತಿದ್ದು, ಗ್ರಾಮೀಣ ಭಾಗದ ಮಹಿಳೆಯರಿಗೆ ನೈರ್ಮಲ್ಯ ಹಾಗೂ ಸ್ಯಾನಿಟರಿ ನ್ಯಾಪ್ಕಿನ್ ಗಳ ಬಳಕೆಯಿಂದಾಗುವ ಸೈಡ್ ಎಫೆಕ್ಟ್ ಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಸಂಸದ ಹಿಬಿ ಈಡನ್ ಹೇಳಿದ್ದಾರೆ. ತಿಂಗಲ್ ಯೋಜನೆಯ ಮೂಲಕ HLL ಮ್ಯಾನೇಜ್‌ಮೆಂಟ್ ಅಕಾಡೆಮಿ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಈ ಸ್ಕೀಮ್‌ನ ಪಾಲುದಾರಿಕೆ ವಹಿಸಿಕೊಂಡಿದ್ದಾರೆ.
ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಕುಂಬಳಂಗಿಯನ್ನು ಮಾದರಿ ಗ್ರಾಮ ಎಂದು ಘೋಷಿಸಲಿದ್ದಾರೆ. ಮಾದರಿ ಗ್ರಾಮ ಯೋಜನೆಯನ್ನು ಪ್ರಧಾನ ಮಂತ್ರಿ ಸಂಸದ್ ಆದರ್ಶ ಗ್ರಾಮ ಯೋಜನೆ (SAGY) ಮೂಲಕ ಜಾರಿಗೊಳಿಸಲಾಗಿದೆ. ಕೊಚ್ಚಿಯಲ್ಲಿರುವ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಕುಂಬಳಂಗಿ ಕೂಡ ಹೊಸ ಪ್ರವಾಸಿ ಮಾಹಿತಿ ಕೇಂದ್ರವನ್ನು ಹೊಂದಿರುತ್ತದೆ. ಇದು ಭಾರತದ ಮೊದಲ ಮಾದರಿ ಪ್ರವಾಸಿ ಗ್ರಾಮ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.