ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಬಳಿಕ ಕುಮಾರಪರ್ವತದಲ್ಲಿ ಚಾರಣಕ್ಕೆ ನಿರ್ಬಂಧ ಹೇರಿರುವ ವಿಚಾರದ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಈಶ್ವರ ಖಂಡ್ರೆ, ಕುಮಾರಪರ್ವತ ಚಾರಣಪಥದಲ್ಲಿ ಜನಜಂಗುಳಿಯಿಂದಾಗಿ ಪರಿಸರ ಹಾನಿ ಭೀತಿಯಿದೆ. ಹಾಗಾಗಿ ಚಾರಣ ನಿಯಂತ್ರಣ ನಿಟ್ಟಿನಲ್ಲಿ ವರದಿ ಸಲ್ಲಿಸಲು ಸೂಚಿಸಿದ್ದೇವೆ ಎಂದರು.
ಅಲ್ಲದೇ ಚಾರಣಕ್ಕೆ ಆನ್ ಲೈನ್ ದಾಖಲಾತಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಅಪಾರ ಹಾನಿಯಾಗಿದೆ. ಕರಾವಳಿ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡುವ ಗುರಿಯಿದೆ. ರಾಜ್ಯದ ಎಲ್ಲಾ ಚಾರಣಪಥಗಳನ್ನು ಆನ್ ಲೈನ್ ವ್ಯಾಪ್ತಿಗೆ ತರುತ್ತಿದ್ದೇವೆ ಎಂದು ಹೇಳಿದರು.
ಜನಜಂಗುಳಿಯುಂಟಾದರೆ ಚಾರಣಪಥದಲ್ಲಿ ಇಕ್ಕಟ್ಟು ಉಂಟಾಗಿ ಸಮಸ್ಯೆಯಾಗಲಿದೆ. ಉದಾಹರಣೆಗೆ ಕುಮಾರಪರ್ವತದಲ್ಲಿ ಸುಮಾರು 20 ಕೀ.ಮೀ ಚಾರಣ ಇರಬಹುದು. ಇಂಥಹ ಜಾಗದಲ್ಲಿ ಎಷ್ಟು ಜನ ಹೋಗಬಹುದು ಎಂಬುದನ್ನು ನೋಡಿಕೊಂಡು ಆನ್ ಲೈನ್ ಮೂಲಕ ನಿಗದಿ ಮಾಡುತ್ತೇವೆ. ಮಿತಿಗಳನ್ನು ಹಾಕಿ ಪಾಸ್ ನೀಡಲಾಗುವುದು ಎಂದರು.