ನೀವು ಚಾರಣ ಪ್ರಿಯರೇ, ಹಾಗಾದರೆ ನಿಮಗಿಷ್ಟವಾಗುವ ತಾಣವೊಂದು ಸುಬ್ರಹ್ಮಣ್ಯ ದೇಗುಲದ ಸಮೀಪದಲ್ಲಿದೆ. ಅದರ ಹೆಸರು ಕುಮಾರ ಪರ್ವತ. ಸಮುದ್ರ ಮಟ್ಟದಿಂದ 1712 ಮೀಟರ್ ಎತ್ತರದಲ್ಲಿರುವ ಈ ಪರ್ವತ, ಸುಬ್ರಹ್ಮಣ್ಯ ದೇವಸ್ಥಾನದಿಂದ 13 ಕಿ.ಮೀ. ದೂರದಲ್ಲಿದೆ.
ಇದು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗಿನ ಗಡಿಯಲ್ಲಿದೆ. ಸುಬ್ರಹ್ಮಣ್ಯದಿಂದ ಹೊರಟರೆ 4-5 ಕಿ.ಮೀ.ವ್ಯಾಪ್ತಿಯಲ್ಲಿ ಒಂದು ದಟ್ಟವಾದ ಅರಣ್ಯ ಸಿಗುತ್ತದೆ.
ಅಲ್ಲಿಂದ ಕೊಂಚ ಮುಂದೆ ತೆರಳಿದರೆ ಅರಣ್ಯ ಇಲಾಖೆಯ ತಪಾಸಣಾ ಕೇಂದ್ರವಿದೆ. ಇಲ್ಲಿ ಹಣ ಪಾವತಿಸಿ ಅನುಮತಿ ಪಡೆದು ಮುಂದುವರಿದರೆ ಕಲ್ಲಿನ ಮಂಟಪವಿದೆ. ಇಲ್ಲಿ ಸಣ್ಣ ಗುಂಡಿಯಲ್ಲಿ ಸದಾ ನೀರು ಉಕ್ಕುತ್ತದೆ. ಬಳಿಕ ಕಡಿದಾದ ಬಂಡೆಯನ್ನು ಹತ್ತಿ ಮುಂದುವರಿಯಬೇಕು.
ಮನಸ್ಸಿಗೆ ಮುದ ನೀಡುವ ಸೌಂದರ್ಯ ಹೊಂದಿರುವ ಕುಮಾರ ಪರ್ವತ ಚಾರಣಿಗರಿಗೆ ಸವಾಲನ್ನು ಒಡ್ಡುತ್ತದೆ. ಇಲ್ಲಿ ಬಂದು ಸೌಂದರ್ಯ ಸವಿಯುತ್ತಾ ಮೈಮರೆಯುವ ಮಂದಿ ಹಲವಾರು ಅಪಾಯಗಳನ್ನೂ ತಂದುಕೊಳ್ಳುತ್ತಾರೆ. ಚಾರಣದ ಪ್ರತಿ ಹೆಜ್ಜೆಯೂ ಹೊಸತಾಗಿರುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕಾಡು ಹಾದಿಯಲ್ಲಿ ದಾರಿ ತಪ್ಪುವ, ಬೆಳೆದು ನಿಂತ ಆನೆಹುಲ್ಲಿನಿಂದ ಗಾಯಮಾಡಿಕೊಳ್ಳುವ, ಕಾಡುಪ್ರಾಣಿಗಳ ದಾಳಿಯ ಸಂಭವವೂ ಹೆಚ್ಚಿರುತ್ತದೆ.