
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಡೆಸಲು ಉದ್ದೇಶಿಸಿರುವ ಜನಾಂದೋಲನ ಕಾರ್ಯಕ್ರಮಕ್ಕೆ ಯತ್ನಾಳ್ ಬಣದ ನಾಯಕ ಕುಮಾರ್ ಬಂಗಾರಪ್ಪ ಕಿಡಿಕಾರಿದ್ದಾರೆ.
ಈ ಹಿಂದೆ ಹಲವು ವಿಷಯಗಳ ಬಗ್ಗೆ ಆಂದೋಲನ ನಡೆಸಲು ಅವಕಾಶವಿತ್ತು. ಆಗ ಯಾವ ಆಂದೋಲನವನ್ನು ಮಾಡಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ಸುದ್ದಿಗೋಷ್ಠಿ ಕರೆದು ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡಿ ಎಂದು ಮಾತನಾಡುತ್ತಾರೆ. ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾತು ಇವರಿಗೆ ಯಾಕೆ ಬೇಕು? ನಾವು ನಿಮ್ಮನ್ನೇ ಬದಲಾವಣೆ ಮಾಡಬೇಕು ಅಂತಿದ್ದೇವೆ ಎಂದರು.
ಆಂದೋಲನ ಪದದ ಅರ್ಥ ಇವರಿಗೆ ಗೊತ್ತಿದೆಯೋ ಇಲ್ಲವೋ. ನಾವ್ಯಾರೂ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿಲ್ಲ. ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸರಿಯಾಗಿಲ್ಲ. ತಮಗೆ ಬೇಕಾದವರನ್ನು ಆಯ್ಕೆ ಮಾಡುತ್ತಿದ್ದಾರೆ. ಬಿಜೆಪಿ ಈಗ ಕೆಜೆಪಿ ಟೀಂ ಆಗಿದೆ. ಕೆಜೆಪಿಯವರನ್ನೇ ಎಲ್ಲದಕ್ಕೂ ನೇಮಕ ಮಾಡುತ್ತಿದ್ದಾರೆ. ಹಾಗಾಗಿಯೇ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ ಎಂದರು.
ಈಗಿರುವ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗೇ ಆಗುತ್ತೆ. ಈಗಾಗಲೇ ಹೈಕಮಾಂಡ್ ನಾಯಕರಿಗೆ ನಮ್ಮ ವಿಷಯ ತಿಳಿಸಿದ್ದೇವೆ. ಅಗತ್ಯವಿದ್ದರೆ ಮತ್ತೆ ಭೇಟಿಯಾಗಿ ಮಾತುಕತೆ ನಡೆಸುತ್ತೇವೆ ಎಂದರು.