ಉಡುಪಿ: ಕರಾವಳಿ ಜಿಲ್ಲೆಯ ರೈತರು, ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಕುಚ್ಚಲಕ್ಕಿ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಕನಿಷ್ಠ ಬೆಂಬಲ ಬೆಲೆ ಖರೀದಿಗೆ ಅನುಮೋದನೆ ನೀಡಲಾಗಿದೆ.
ಈ ಜಿಲ್ಲೆಗಳಲ್ಲಿ ರೈತರು ಸ್ಥಳೀಯವಾಗಿ ಬೆಳೆಯುವ ಕಜೆ, ಜ್ಯೋತಿ, ಜಯಾ, ಪಂಚಮುಖಿ, ಉಮ ತಳಿಗಳ ಕುಚ್ಚಲಕ್ಕಿಯನ್ನು ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿ ವಿತರಿಸಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ರಾಜ್ಯ ಸಚಿವ ಶ್ರೀನಿವಾಸ ಶ್ರೀನಿವಾಸ ಪೂಜಾರಿ, ಉಭಯ ಜಿಲ್ಲೆಗಳ ಸಂಸದರು, ಶಾಸಕರ ಪ್ರಯತ್ನದಿಂದ ರಾಜ್ಯ ಸರ್ಕಾರ ಈ ಬೇಡಿಕೆ ಅನುಮೋದಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಪಡಿತರ ಖಾತೆ ಸಚಿವ ಪಿಯುಷ್ ಗೋಯಲ್ ಅವರು ಪ್ರಸ್ತಾವನೆಗೆ ಅನುಮೋದನೆ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ. ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಪತ್ರ ಬರೆದು ಅನುಮೋದನೆ ನೀಡಿದ ಬಗ್ಗೆ ತಿಳಿಸಿದ್ದಾರೆ. ಇದಕ್ಕಾಗಿ ಪ್ರಯತ್ನಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದು, ಎರಡು ಜಿಲ್ಲೆಗಳಿಂದ 1 ಲಕ್ಷ ಕ್ವಿಂಟಾಲ್ ಕುಚ್ಚಲಕ್ಕಿ ಖರೀದಿಸಲಾಗುವುದು ಎಂದು ಹೇಳಲಾಗಿದೆ.