
ಗುರು ನಾನಕ್ ಜಯಂತಿಯ ಸಂದರ್ಭದಲ್ಲಿ ಈ ವಿಚಾರವಾಗಿ ಮಾತನಾಡಿದ ಮೋದಿ, ಮೇಲ್ಕಂಡ ಕಾನೂನುಗಳನ್ನು ಹಿಂಪಡೆಯುವ ಶಾಸನಾತ್ಮಕ ಪ್ರಕ್ರಿಯೆಗೆ ನವೆಂಬರ್ 29ರಿಂದ ಸಂಸತ್ತಿನಲ್ಲಿ ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನದಲ್ಲಿ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಪ್ರತಿಭಟನಾನಿರತ ರೈತರನ್ನು ತಂತಮ್ಮ ಮನೆಗಳಿಗೆ ಮರಳಿ ಹೋಗಲು ಮೋದಿ ಮನವಿ ಮಾಡಿಕೊಂಡಿದ್ದಾರೆ.
ಕೃಷಿ ಸುಧಾರಣಾ ಕಾನೂನುಗಳ ವಿರೋಧಿಸಿ ರೈತರು ಪ್ರತಿಭಟನೆಗೆ ಇಳಿದು ವರ್ಷ ಕಳೆಯುವ ಮುನ್ನವೇ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಪ್ರಧಾನಿಯ ಈ ಘೋಷಣೆಯ ಬೆನ್ನಿಗೇ ಪ್ರತಿಭಟನೆಗಾರರ ಸಂಭ್ರಮ ಮುಗಿಲು ಮುಟ್ಟಿತ್ತು.
ಘಾಜಿಪುರ ಗಡಿಯಲ್ಲಿ ಪ್ರತಿಭಟನೆಯಲ್ಲಿದ್ದ ಮಂದಿ ಪ್ರಧಾನಿಯ ಘೋಷಣೆ ಹೊರಡುತ್ತಲೇ ಜಿಲೇಬಿಗಳನ್ನು ಹಂಚಿ ಸಂಭ್ರಮಿಸಿದ್ದಾರೆ.
ಪಂಜಾಬ್, ಹರಿಯಾಣಾ, ಉತ್ತರ ಪ್ರದೇಶದ ಪಶ್ಚಿಮ ಭಾಗದ ನೂರಾರು ರೈತರು ಸಂಯುಕ್ತ ಕಿಸಾನ್ ಮೋರ್ಚಾದ ಬ್ಯಾನರ್ ಅಡಿ ದೆಹಲಿಯ ಅನೇಕ ಕಡೆಗಳಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು. ಹೊಸ ಕಾನೂನುಗಳು ರೈತರಿಗೆ ತಮ್ಮ ಉತ್ಪನ್ನಗಳ ಮಾರಾಟ ಮಾಡಲು ಮಧ್ಯವರ್ತಿಗಳ ಕಾಟದಿಂದ ಮುಕ್ತಿ ನೀಡಲಿವೆ ಎಂದು ಕೇಂದ್ರ ಸರ್ಕಾರ ವಿವರಿಸಿ ತಿಳಿಸಲು ಮಾಡಿದ ಯತ್ನಗಳು ಫಲಗೂಡಿಲ್ಲ.
ಈ ವಿಚಾರವಾಗಿ ಟ್ವೀಟ್ ಮಾಡಿದ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, “ಒಳ್ಳೆ ಸುದ್ದಿ! ಗುರುನಾನಕ್ ಜಯಂತಿಯಂದು ಪ್ರತಿಯೊಬ್ಬ ಪಂಜಾಬಿಯ ಬೇಡಿಕೆಗೆ ಮನ್ನಣೆ ಕೊಟ್ಟು ಮೂರು ಕಪ್ಪು ಕಾನೂನುಗಳನ್ನು ಹಿಂಪಡೆದ ಪ್ರಧಾನಿ ಮೋದಿಗೆ ಧನ್ಯವಾದಗಳು. ರೈತರ ಏಳಿಗೆಗಾಗಿ ಕೇಂದ್ರ ಸರ್ಕಾರ ಒಮ್ಮತದೊಂದಿಗೆ ಕೆಲಸ ಮಾಡಲಿದೆ ಎಂಬ ವಿಶ್ವಾಸ ನನ್ನದು!” ಎಂದಿದ್ದಾರೆ.